ಯುಗಾದಿ ಹಬ್ಬದ ವೈಜ್ಞಾನಿಕ ರಹಸ್ಯ: ಬೇವು-ಬೆಲ್ಲ ತಿನ್ನುವ ಹಿಂದಿನ ಅಚ್ಚರಿಯ ಆರೋಗ್ಯದ ಗುಟ್ಟುಗಳು ಏನೇನು ಗೊತ್ತಾ?
ನಮಸ್ಕಾರ ಕಣ್ರಪ್ಪ! ಹೆಂಗಿದ್ದೀರಾ? ಎಲ್ಲರೂ ಆರಾಮಾಗಿದ್ದೀರಾ ಅಂತ ಅನ್ಕೊಂಡಿದ್ದೀನಿ. ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ, ಅಂದ್ರೆ ನಮ್ಮ ಹೆಮ್ಮೆಯ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಯುಗಾದಿ ಹಬ್ಬ ಬಂತು ಅಂದ್ರೆ ಸಾಕು, ನಮ್ಮ ಹಳ್ಳಿಗಳ ಕಡೆ ಮನೆ-ಮನಗಳಲ್ಲಿ ಎಲ್ಲಿಲ್ಲದ ಸಂಭ್ರಮ, ಸಡಗರ ಮನೆ ಮಾಡಿಬಿಡುತ್ತೆ ಅಲ್ವಾ?
ಅದರಲ್ಲೂ ರೈತಾಪಿ ವರ್ಗದ ಜನರಿಗಂತೂ ಇದು ಅಂತಿಂಥ ಹಬ್ಬ ಅಲ್ಲ. ಮುಂಗಾರು ಮಳೆಯ ನಿರೀಕ್ಷೆಯಲ್ಲಿ, ಭೂಮಿ ತಾಯಿಯ ಒಡಲನ್ನ ನಂಬಿ ಬದುಕೋ ನಮಗೆ, ಇದೊಂದು ಹೊಸ ಭರವಸೆಯ ಹಬ್ಬ.
ಮನೆ ಬಾಗಿಲಿಗೆ ಹಸಿರು ತೋರಣ ಕಟ್ಟಿ, ಮನೆಯನ್ನೆಲ್ಲಾ ತೊಳೆದು, ಸಗಣಿ ನೀರು ಸಿಂಪಡಿಸಿ ರಂಗೋಲಿ ಬಿಡಿಸಿದರೆ, ಆಹಾ! ನೋಡೋಕೆ ಎರಡು ಕಣ್ಣು ಸಾಲದು ಬಿಡಿ.
ಮನೆಯಲ್ಲಿ ಘಮಘಮಿಸುವ ಹೋಳಿಗೆ, ಪಾಯಸದ ವಾಸನೆ, ಮೈಮೇಲೆ ಹೊಸ ಬಟ್ಟೆ ಹಾಕಿಕೊಂಡು ಓಡಾಡೋ ಮಕ್ಕಳ ಖುಷಿ… ಇದೆಲ್ಲಾ ನೋಡೋದೇ ಒಂದು ಆನಂದ.
ಆದರೆ, ನಾವೆಲ್ಲಾ ಪ್ರತಿ ವರ್ಷ ಇಷ್ಟು ಅದ್ಧೂರಿಯಾಗಿ ಆಚರಿಸುವ ಈ ಯುಗಾದಿ ಹಬ್ಬದ ಹಿಂದೆ ಎಂಥಾ ದೊಡ್ಡದೊಂದು ಗುಟ್ಟಿದೆ, ವೈಜ್ಞಾನಿಕ ಕಾರಣ ಇದೆ ಅಂತ ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ?
ಸುಮ್ನೆ ಹಬ್ಬ ಬಂತು, ಹೋಳಿಗೆ ಊಟ ಮಾಡಿದ್ವಿ, ಹೊಸ ಬಟ್ಟೆ ತೊಟ್ವಿ ಅಂತ ಮಾತ್ರ ಅನ್ಕೋಬೇಡಿ. ನಮ್ಮ ಹಿರಿಯರು ಮಾಡಿರೋ ಪ್ರತಿಯೊಂದು ಆಚರಣೆಯ ಹಿಂದೆಯೂ ನೂರಾರು ಅರ್ಥಗಳಿವೆ.
ಬನ್ನಿ, ಇವತ್ತು ನಮ್ಮೂರ ಶೈಲಿಯಲ್ಲಿಯೇ ಆ ಅಸಲಿ ಗುಟ್ಟೇನು, ಈ ಹಬ್ಬದ ಹಿಂದಿರೋ ವೈಜ್ಞಾನಿಕ ರಹಸ್ಯ ಏನು ಅನ್ನೋದನ್ನ ಎಳೆಎಳೆಯಾಗಿ ಬಿಡಿಸಿ ಹೇಳ್ತೀನಿ. ಸ್ವಲ್ಪ ಕಿವಿಗೊಟ್ಟು ಕೇಳಿ.
ಹಸಿರುಟ್ಟ ಪ್ರಕೃತಿ: ಯುಗಾದಿ ಅಂದ್ರೆ ಹೊಸ ಜಗದ ಆರಂಭ
ಮೊದಲಿಗೆ ‘ಯುಗಾದಿ’ ಅಂದ್ರೆ ಏನು ಅಂತ ತಿಳ್ಕೊಳೋಣ. ಯುಗಾದಿ ಅಂದ್ರೆ ‘ಯುಗದ ಆದಿ’, ಅಂದರೆ ಒಂದು ಹೊಸ ಕಾಲದ ಅಥವಾ ಯುಗದ ಶುರುವಾಗುವ ಶುಭ ದಿನ.
ನಮ್ಮ ಹಿಂದೂ ಧರ್ಮದ ಪುರಾಣಗಳ ಪ್ರಕಾರ ಹೇಳೋದಾದ್ರೆ, ಜಗನ್ನಾಟಕ ಸೂತ್ರಧಾರಿ, ಸೃಷ್ಟಿಕರ್ತನಾದ ಪ್ರಜಾಪತಿ ಬ್ರಹ್ಮ ದೇವರು ಈ ಇಡೀ ಭೂಮಂಡಲವನ್ನ ಸೃಷ್ಟಿ ಮಾಡಿದ್ದೇ ಈ ಯುಗಾದಿ ದಿನವಂತೆ!
ಹೌದು, ಈ ಚೈತ್ರ ಮಾಸದ ಶುಕ್ಲ ಪಕ್ಷದ ಪ್ರಥಮ ದಿನದಂದು, ಮುಂಜಾನೆ ಸೂರ್ಯ ಹುಟ್ಟುವಾಗ ಈ ಜಗತ್ತಿನ ಸೃಷ್ಟಿ ಕಾರ್ಯ ಶುರುವಾಯ್ತು ಅಂತ ನಮ್ಮ ಹಿರಿಯರು ಹೇಳ್ತಾರೆ.
ಇನ್ನು ನಮ್ಮ ಕಾಡು-ಮೇಡು, ತೋಟ-ತುಡಿಕೆಗಳ ಕಡೆ ಒಮ್ಮೆ ಕಣ್ಣು ಹಾಯಿಸಿ ನೋಡಿ. ಪ್ರಕೃತಿಯಲ್ಲಿ ಎಂಥಾ ಸುಂದರವಾದ ಬದಲಾವಣೆ ಆಗಿರುತ್ತೆ ಗೊತ್ತಾ?
ಚಳಿಗಾಲದಲ್ಲಿ ತಮ್ಮ ಹಳೆಯ, ಒಣಗಿದ ಎಲೆಗಳನ್ನೆಲ್ಲಾ ಉದುರಿಸಿ ಬೋಳಾಗಿದ್ದ ಮರ-ಗಿಡಗಳೆಲ್ಲಾ, ಈಗಷ್ಟೇ ಹೊಸದಾಗಿ ಹಸಿರು ಚಿಗುರು ಹೊಡೆದು ನಳನಳಿಸುತ್ತಾ ಇರುತ್ತವೆ.
ಪ್ರಕೃತಿ ಮಾತೆಯೇ ಹಸಿರು ಸೀರೆ ಉಟ್ಟು, ಮೈತುಂಬಾ ಒಡವೆ ಹಾಕಿಕೊಂಡ ಹಾಗೆ ಸಿಂಗಾರಗೊಂಡು, “ಬನ್ನಿ ಹೊಸ ವರ್ಷವನ್ನ ಸ್ವಾಗತಿಸೋಣ” ಅಂತ ನಮ್ಮನ್ನ ಕೈಬೀಸಿ ಕರೆಯುತ್ತಿರುವ ಹಾಗೆ ಭಾಸವಾಗುತ್ತೆ.
ಇದನ್ನೂ ಓದಿ: ಆಸ್ತಿ ಮಾರಾಟ ಅಥವಾ ಖರೀದಿ ಮಾಡುತ್ತಿದ್ದೀರಾ ಹಾಗಾದರೆ ಆಸ್ತಿ ವರ್ಗಾವಣೆಯ ನಮ್ಮ ರೈತರಿಗೆ ಇಲ್ಲಿದೆ ಕಾನೂನಿನ ಬ್ರಹ್ಮಾಸ್ತ್ರ
ಮತ್ಸ್ಯಾವತಾರದಿಂದ ರಾಮರಾಜ್ಯದವರೆಗೆ: ಎಷ್ಟೊಂದು ಕಥೆಗಳಿವೆ ಗೊತ್ತಾ
ಬರೀ ಪ್ರಕೃತಿ ಮಾತ್ರವಲ್ಲ, ಈ ಯುಗಾದಿ ಹಬ್ಬದ ದಿನಕ್ಕೆ ನಮ್ಮ ಇತಿಹಾಸ ಮತ್ತು ಪುರಾಣಗಳಲ್ಲೂ ಬಹಳ ವಿಶೇಷವಾದ ಸ್ಥಾನ ಇದೆ ಕಣ್ರಪ್ಪ.
ಈ ದಿನ ಏನೇನು ಮಹತ್ವದ ಘಟನೆಗಳು ನಡೆದಿವೆ ಅಂತ ಒಂದೊಂದಾಗಿ ಪಟ್ಟಿ ಮಾಡ್ತೀನಿ ನೋಡಿ:
-
ಮತ್ಸ್ಯಾವತಾರ: ಭಗವಂತ ಈ ಪ್ರಪಂಚವನ್ನು ಪ್ರಳಯದಿಂದ ಉಳಿಸೋಕೆ ‘ಮತ್ಸ್ಯಾವತಾರ’ (ಮೀನಿನ ಅವತಾರ) ಎತ್ತಿದ ಪವಿತ್ರ ದಿನವಿದು.
-
ರಾಮರಾಜ್ಯದ ಆರಂಭ: ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ದೇವರು ತನ್ನ 14 ವರ್ಷಗಳ ವನವಾಸ ಮುಗಿಸಿ, ರಾವಣನ ಸಂಹಾರ ಮಾಡಿ, ತಮ್ಮ ಊರಾದ ಅಯೋಧ್ಯೆಗೆ ವಾಪಸ್ ಬಂದಿದ್ದೇ ಇದೇ ದಿನ.
-
ಶಕೆಗಳ ಆರಂಭ: ಉತ್ತರ ಭಾರತದ ಕಡೆ ‘ವಿಕ್ರಮಾದಿತ್ಯ ಶಕೆ’ ಶುರುವಾಗಿದ್ದು ಇದೇ ಯುಗಾದಿ ದಿನವಾದರೆ, ನಮ್ಮ ದಕ್ಷಿಣ ಭಾರತದಲ್ಲಿ ‘ಶಾಲಿವಾಹನ ಶಕೆ’ ಆರಂಭವಾದದ್ದು ಕೂಡ ಇದೇ ದಿನ.
-
ವಸಂತ ನವರಾತ್ರಿ: ದುರ್ಗಾ ಮಾತೆಯ ಆರಾಧನೆಗೆ ಮೀಸಲಾದ ‘ವಸಂತ ನವರಾತ್ರಿ’ಯ ದುರ್ಗಾ ಪೂಜೆಗೆ ನಾಂದಿ ಹಾಡುವ ಮೊದಲ ದಿನ ಕೂಡ ಇದೇ ಚೈತ್ರ ಮಾಸದ ಪಾಡ್ಯ ಆಗಿರುತ್ತೆ.
ನೋಡಿದ್ರಲ್ಲ, ನಮ್ಮ ಒಂದೊಂದು ಹಬ್ಬದ ಹಿಂದೆಯೂ ಎಷ್ಟೆಲ್ಲಾ ಇತಿಹಾಸ, ಎಷ್ಟೆಲ್ಲಾ ಪೌರಾಣಿಕ ಕಥೆಗಳು ಅಡಗಿವೆ ಅಂತ!
ಬರೀ ಬೆಲ್ಲ ಗುಳುಂ ಬೇವು ಉಫ್ ಹೀಗ್ ಮಾಡೋ ಮುನ್ನ ಈ ಗುಟ್ಟು ಕೇಳಿ
ಯುಗಾದಿ ಅಂದ ತಕ್ಷಣ ನಮ್ಮ ಕಣ್ಣ ಮುಂದೆ ಬರೋದು, ಬಾಯಲ್ಲಿ ನೀರೂರಿಸೋದು ಈ ಬೇವು-ಬೆಲ್ಲ.ಬೆಲ್ಲ ಅಂದ್ರೆ ಬಾಯಿಗೆ ಸಿಹಿ, ಬೇವು ಅಂದ್ರೆ ಕಹಿ. ಈ ಎರಡನ್ನೂ ಸೇರಿಸಿ ತಿಂದ್ರೆ ಅದೇ ಒಂದು ರೀತಿಯ ಮಜಾ. ಆದರೆ ಇದರ ಹಿಂದಿರೋ ತತ್ವ ಏನು ಗೊತ್ತಾ? ನಮ್ಮ ಬದುಕು ಅಂದ್ರೆನೇ ಹಾಗೆ ಅಲ್ವಾ?
ಜೀವನದಲ್ಲಿ ಬರೀ ಸುಖಾನೇ ತುಂಬಿದ್ರೆ, ಆ ಸುಖದ ಅಸಲಿ ಬೆಲೆ ನಮಗೆ ಯಾವತ್ತೂ ಅರ್ಥ ಆಗಲ್ಲ. ಹಾಗೇ ದಿನ ಬೆಳಗಾದ್ರೆ ಬರೀ ಕಷ್ಟಾನೇ ಅನುಭವಿಸ್ತಾ ಇದ್ರೆ, ಮನುಷ್ಯನಿಗೆ ಬದುಕೋಕೆ ಉತ್ಸಾಹನೇ ಇರಲ್ಲ.
ನಮ್ಮ ಪ್ರಕೃತಿಯಲ್ಲಿ ನೋಡಿ, ಹಗಲು-ರಾತ್ರಿ, ಕಷ್ಟ-ಸುಖ, ಪಾಪ-ಪುಣ್ಯ, ಹುಟ್ಟು-ಸಾವು, ಗಂಡು-ಹೆಣ್ಣು… ಇವೆಲ್ಲಾ ಯಾವತ್ತಿಗೂ ಜೋಡಿ-ಜೋಡಿಯಾಗೇ ಬರ್ತವೆ. ಇದನ್ನ ಯಾರು ಕೂಡ ಬದಲಾಯಿಸೋಕೆ ಸಾಧ್ಯವಿಲ್ಲ.
ಅದೇ ರೀತಿ ನಮ್ಮ ಜೀವನದಲ್ಲಿ ಬರೋ ಕಷ್ಟ ಮತ್ತು ಸುಖಗಳೆರಡನ್ನೂ ನಾವು ಸಮಾನವಾಗಿ ಸ್ವೀಕರಿಸಬೇಕು. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ, ಎರಡನ್ನೂ ಸಮಚಿತ್ತದಿಂದ ಎದುರಿಸಬೇಕು ಅಂತ ನಮಗೆ ಹೇಳಿಕೊಡೋದೇ ಈ ಬೇವು-ಬೆಲ್ಲ.
ಆದರೆ, ನಮ್ಮ ಜನ ಈಗ ಏನ್ ಮಾಡ್ತಾರೆ ಗೊತ್ತಾ? ಕೈಗೆ ಬೇವು-ಬೆಲ್ಲ ಕೊಟ್ರೆ, ಬೆಲ್ಲನ ಮಾತ್ರ ಗುಳುಂ ಅಂತ ನುಂಗಿ, ಕಹಿ ಬೇವನ್ನ ಪಕ್ಕಕ್ಕೆ ಉಗಿದು ಬಿಡ್ತಾರೆ! “ನಮ್ಮ ಜೀವನ ಬರೀ ಸಿಹಿಯಾಗಿರಲಿಪ್ಪ, ಈ ಕಹಿ ಬೇಡ” ಅನ್ನೋದು ಅವರ ಲೆಕ್ಕಾಚಾರ.
ಆದರೆ, ಈ ಕಹಿ ಬೇವಿನ ಹಿಂದಿರೋ ದೊಡ್ಡ ವೈಜ್ಞಾನಿಕ ಕಾರಣ, ಅದರ ಪವರ್ ಏನು ಅಂತ ಒಮ್ಮೆ ಕೇಳಿದ್ರೆ, ನೀವು ಖಂಡಿತ ಇನ್ಮುಂದೆ ಬೇವಿನ ಎಲೆಯನ್ನ ಬಿಸಾಕಲ್ಲ!
ಇದನ್ನೂ ಓದಿ: ಕಿಸೇಲಿ ಕಾಸಿಲ್ಲ ಅಂದ್ರೂ ಹೊಲದಲ್ಲಿ ಚಿನ್ನ ಬೆಳೆಯಬಹುದು ಇದು ನಮ್ಮೂರ ನೈಸರ್ಗಿಕ ತರಕಾರಿ ಕೃಷಿಯ ಜಾದು!
ಕಹಿ ಆದ್ರೂ ಇದರ ಖದರ್ ಕಮ್ಮಿ ಇಲ್ಲ: ಬೇವಿನ ಎಲೆಯ ಸೈಂಟಿಫಿಕ್ ಪವರ್ ಇದು
ಯುಗಾದಿ ಹಬ್ಬ ಬರೋದು ಯಾವಾಗ? ಚಳಿಗಾಲ (ಶಿಶಿರ ಋತು) ಮುಗಿದು ಬೇಸಿಗೆ ಕಾಲ (ವಸಂತ ಋತು) ಶುರುವಾಗೋ ಹೊತ್ತಿನಲ್ಲಿ. ಇದನ್ನ ‘ಸಂಧಿಕಾಲ’ ಅಂತ ಕರೀತಾರೆ. ಈ ಟೈಮ್ನಲ್ಲಿ ಚಳಿಯೆಲ್ಲಾ ಮಾಯವಾಗಿ, ಬಿಸಿಲಿನ ಝಳ ನಿಧಾನವಾಗಿ ಜಾಸ್ತಿ ಆಗ್ತಾ ಹೋಗುತ್ತೆ.
ಬಿಸಿಲು ಶುರುವಾಯ್ತು ಅಂದ್ರೆ ಸಾಕು, ಪ್ರಕೃತಿಯಲ್ಲಿ ಮಾತ್ರವಲ್ಲ, ನಮ್ಮ ದೇಹದಲ್ಲೂ ಸಾಕಷ್ಟು ಬದಲಾವಣೆಗಳು ಆಗ್ತವೆ. ಬಿಸಿಲಿಗೆ ಸ್ವಲ್ಪ ಆಚೆ ಹೋದ್ರೆ ಸಾಕು, ನಮ್ಮ ಚರ್ಮ ಕಪ್ಪಾಗುತ್ತೆ (Skin tan), ಗಾಳಿಗೆ ಒಣಗಿದಂಗೆ ಆಗುತ್ತೆ, ಅಲರ್ಜಿ ಶುರುವಾಗುತ್ತೆ ಅಲ್ವಾ?
ಈ ಸುಡುವ ಬಿಸಿಲಿನ ತಾಪದಿಂದ ನಮ್ಮ ಚರ್ಮವನ್ನ, ನಮ್ಮ ದೇಹವನ್ನ ಕಾಪಾಡೋ ಅದ್ಭುತವಾದ ಶಕ್ತಿ ಈ ಭೂಮಿ ಮೇಲೆ ಇರೋದು ಆ ಕಹಿ ಬೇವಿನ ಎಲೆಗೆ ಮಾತ್ರ ಕಣ್ರಪ್ಪ!
ಸ್ವಲ್ಪ ಯೋಚನೆ ಮಾಡಿ, ಸುಡು ಬಿಸಿಲಿನಲ್ಲಿ ಬೇರೆ ಮರಗಳೆಲ್ಲಾ ಬಾಡಿ ಹೋದರೂ, ಬೇವಿನ ಮರ ಮಾತ್ರ ಎಂಥಾ ಉರಿ ಬಿಸಿಲಿನಲ್ಲೂ ಹಸಿರಾಗಿ, ತಂಪಾಗಿ ನಳನಳಿಸುತ್ತಾ ಇರುತ್ತೆ ಅಲ್ವಾ? ಆ ಬಿಸಿಲನ್ನು ತಡೆದುಕೊಳ್ಳುವ ಶಕ್ತಿ ಆ ಮರಕ್ಕೆ ಎಲ್ಲಿಂದ ಬಂತು? ಸೂರ್ಯನಿಂದಲೇ ಬಂತು!
ಹೌದು, ಬೇವಿನ ಮರಕ್ಕೂ, ಸೂರ್ಯನಿಗೂ ಬಿಡಿಸಲಾರದ ನಂಟು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೇವಿನ ಮರಕ್ಕೆ ‘ಉತ್ತರಭಾದ್ರ’ ನಕ್ಷತ್ರ ಅಂತ ಹೇಳ್ತಾರೆ. ಈ ನಕ್ಷತ್ರದ ಒಡೆಯ ಬೇರಾರೂ ಅಲ್ಲ, ಸಾಕ್ಷಾತ್ ಸೂರ್ಯ ದೇವರು!
ಹೀಗಾಗಿ, ಬೇವಿನ ಮರ ತನ್ನ ಒಡೆಯನಾದ ಸೂರ್ಯನ ಕಿರಣಗಳಿಂದ ಸಕಲ ಶಕ್ತಿಯನ್ನೂ ಹೀರಿಕೊಂಡು, ಆ ಶಕ್ತಿಯನ್ನೆಲ್ಲಾ ತನ್ನ ಎಲೆಗಳಲ್ಲಿ ನಮಗೋಸ್ಕರ ಶೇಖರಿಸಿ ಇಟ್ಟುಕೊಂಡಿರುತ್ತೆ.
ಬೇವಿಗೆ ಯಾಕಿಷ್ಟು ಡಿಮ್ಯಾಂಡ್ ಪಾಶ್ಚಿಮಾತ್ಯ ವಿಜ್ಞಾನಿಗಳು ಬಿಚ್ಚಿಟ್ಟ ಅಸಲಿ ಗುಟ್ಟಿದು!
ಇವತ್ತಿನ ಪಾಶ್ಚಿಮಾತ್ಯ ವಿಜ್ಞಾನಿಗಳು ಕೂಡ ನಮ್ಮ ಬೇವಿನ ಮರದ ಶಕ್ತಿಯನ್ನ ಕಂಡುಹಿಡಿದು ದಂಗಾಗಿದ್ದಾರೆ. ಅವರ ಪ್ರಕಾರ ಬೇವಿನಲ್ಲಿ ಏನೇನಿದೆ ಗೊತ್ತಾ?
-
ನಮ್ಮ ಕಣ್ಣಿನ ದೃಷ್ಟಿಗೆ ಹಾಗೂ ಮೂಳೆಗಳ ಬಲವರ್ಧನೆಗೆ ಬೇಕಾದ ವಿಟಮಿನ್ ‘ಎ’ ಮತ್ತು ‘ಡಿ’ (Vitamin A and D) ಬೇವಿನಲ್ಲಿ ಭರಪೂರ ಆಗಿದೆ.
-
ಮನುಷ್ಯನ ದೇಹಕ್ಕೆ ಅತ್ಯಗತ್ಯವಾಗಿ ಬೇಕಾದ ಪ್ರೋಟೀನ್ (Protein) ಅಂಶ, ಭೂಮಿಯ ಮೇಲಿರುವ ಸಸ್ಯ ವರ್ಗದಲ್ಲಿಯೇ ಅತಿ ಹೆಚ್ಚು ಇರೋದು ಈ ಬೇವಿನಲ್ಲಿ ಅಂತೆ!
-
ಚರ್ಮದ ರಕ್ಷಣೆಗೆ ಮತ್ತು ಚರ್ಮವ್ಯಾಧಿಗಳನ್ನ ದೂರ ಮಾಡಲು ಬೇಕಾದ ಸಲ್ಫರ್ (Sulphur) ಅಥವಾ ಗಂಧಕದ ಅಂಶ ಇದರಲ್ಲಿ ಬೊಂಬಾಟಾಗಿ ಸಿಗುತ್ತೆ.
-
ಮಲೇರಿಯಾದಂತಹ ಭಯಾನಕ ರೋಗಗಳನ್ನ ಓಡಿಸೋ ‘ಕ್ವಿನೈನ್’ (Quinine) ಅನ್ನೋ ಔಷಧೀಯ ಗುಣ ಕೂಡ ಬೇವಿನಲ್ಲಿದೆ.
ಋಷಿಮುನಿಗಳು ಬರೆದಿಟ್ಟ ಅಸಲಿ ಸತ್ಯ: ೩೦ ದಿನ ಬೇವು ತಿಂದ್ರೆ ರೋಗಗಳೆಲ್ಲಾ ಪರಾರಿ
ವಸಂತ ಋತು ಶುರುವಾಗುವಾಗ, ಅಂದರೆ ಬಿಸಿಲು ಏರುತ್ತಿರುವಾಗ ಈ ಬೇವನ್ನ ತಿಂದ್ರೆ ನಮ್ಮ ದೇಹಕ್ಕೆ ಎಲ್ಲಿಲ್ಲದ ರೋಗ ನಿರೋಧಕ ಶಕ್ತಿ (Immunity) ಬರುತ್ತೆ.
ಯಾರು ಈ ವಸಂತ ಕಾಲದಲ್ಲಿ ಬರೋಬರಿ 30 ದಿನಗಳ ಕಾಲ ಪ್ರತಿನಿತ್ಯ ಮುಂಜಾನೆ ಎದ್ದು ಸ್ವಲ್ಪ ಬೇವಿನ ಎಲೆಯನ್ನ ಜಗಿದು ತಿಂತಾರೋ, ಅವರಿಗೆ ಮುಂದಿನ ವರ್ಷ ಯುಗಾದಿ ಬರೋವರೆಗೂ ಯಾವ ರೋಗ-ರುಜಿನಗಳೂ ಹತ್ತಿರ ಸುಳಿಯಲ್ಲವಂತೆ!
ಇದು ನಾನೇನೋ ಸುಮ್ನೆ ವೀಡಿಯೋ ನೋಡಿ ಕಥೆ ಕಟ್ಟಿ ಹೇಳ್ತಿರೋದಲ್ಲ, ನಮ್ಮ ಹಿಂದಿನ ಕಾಲದ ಮಹಾನ್ ಋಷಿ-ಮುನಿಗಳು ತಮ್ಮ ಆಯುರ್ವೇದ ಗ್ರಂಥಗಳಲ್ಲಿ ಬರೆದಿಟ್ಟಿರೋ ಅಕ್ಷರಶಃ ಸತ್ಯ.
“ಶತಾಯುರ್ವಜ್ರದೇಹಾಯ ಸರ್ವ ಸಂಪತ್ಕರಾಯಚ | ಸರ್ವಾರಿಷ್ಟ ವಿನಾಶಾಯ ನಿಂಬಕಂ ದಳಭಕ್ಷಣಂ ||” ಅಂತ ಒಂದು ಹಳೆಯ ಸಂಸ್ಕೃತ ಶ್ಲೋಕ ಇದೆ.
ಅದರ ಅರ್ಥ ಏನಪ್ಪಾ ಅಂದ್ರೆ, “ಬೇವಿನ ಎಲೆಯನ್ನ (ನಿಂಬಕಂ) ತಿಂದ್ರೆ ನಮ್ಮ ದೇಹ ವಜ್ರದ ಹಾಗೆ ಗಟ್ಟಿಯಾಗುತ್ತೆ, ನೂರು ಕಾಲ ಬದುಕುವ ಆಯಸ್ಸು ಬರುತ್ತೆ, ಹಾಗೂ ಬದುಕಿನಲ್ಲಿ ಬರುವ ಎಲ್ಲಾ ಅರಿಷ್ಟಗಳು, ತೊಂದರೆಗಳು ದೂರ ಆಗ್ತವೆ” ಅಂತ. ಅದಕ್ಕೆ ಕಣ್ರಪ್ಪ ನಮ್ಮ ಹಿರಿಯರು ಹಬ್ಬದ ದಿನ ಕಡ್ಡಾಯವಾಗಿ ಬೇವು-ಬೆಲ್ಲ ತಿನ್ಬೇಕು ಅಂತ ನಿಯಮ ಮಾಡಿದ್ರು.
ಗುದ್ದಲಿ ಪೂಜೆ ಮಾಡ್ಬೇಕಾ? ಪಂಚಾಂಗ ನೋಡ್ದೆ ಈ ದಿನ ಶುರು ಮಾಡ್ರಪ್ಪ!
ಇನ್ನು ನಮ್ಮ ಹಳ್ಳಿಗಳ ಕಡೆ, ಯಾವುದಾದ್ರೂ ಮನೆ ಕಟ್ಟೋಕೆ ಗುದ್ದಲಿ ಪೂಜೆ ಮಾಡ್ಬೇಕಾ? ಅಥವಾ ಹೊಲದಲ್ಲಿ ಹೊಸದಾಗಿ ಉಳುಮೆ ಮಾಡೋಕೆ ಶುರು ಮಾಡ್ಬೇಕಾ?
ಅಥವಾ ಯಾವುದಾದ್ರೂ ಹೊಸ ವ್ಯವಹಾರ, ಬ್ಯುಸಿನೆಸ್, ಅಗ್ರಿಮೆಂಟ್ ಶುರು ಮಾಡ್ಬೇಕಾ? ಬೇರೆ ದಿನಗಳಲ್ಲಿ ಆದ್ರೆ ಪುರೋಹಿತರ ಹತ್ರ ಹೋಗಿ, ಪಂಚಾಂಗ ನೋಡಿ, ಒಳ್ಳೆ ಗಳಿಗೆ-ಮುಹೂರ್ತ ಹುಡುಕೊಂಡು ಕಾಯ್ತಾ ಕೂರಬೇಕು.
ಆದರೆ, ಈ ಯುಗಾದಿ ಹಬ್ಬದ ದಿನ ನೀವು ಯಾವ ಮುಹೂರ್ತಾನೋ, ಯಾವ ಪಂಚಾಂಗನೂ ನೋಡೋ ಹಾಗಿಲ್ಲ ಬಿಡಿ!
ಹಿಂದೂ ಧರ್ಮದಲ್ಲಿ ಅತ್ಯಂತ ಶ್ರೇಷ್ಠವಾದ ‘ಮೂರುವರೆ ವಜ್ರದಂತಹ ದಿನಗಳು’ (ಮೂರುವರೆ ಮುಹೂರ್ತಗಳು) ಅಂತ ಬರುತ್ತವೆ. ಅದರಲ್ಲಿ ಈ ಯುಗಾದಿ ಹಬ್ಬ ಕೂಡ ಒಂದು ಪೂರ್ಣ ಮುಹೂರ್ತ.
ಈ ದಿನ ನೀವು ಕಣ್ಣು ಮುಚ್ಚಿಕೊಂಡು ಯಾವುದೇ ಹೊಸ ಕೆಲಸ ಶುರು ಮಾಡಿದ್ರೂ, ಅದು ನೂರಕ್ಕೆ ನೂರು ಯಶಸ್ಸು ಕಾಣುತ್ತೆ, ಅಭಿವೃದ್ಧಿ ಆಗುತ್ತೆ ಅನ್ನೋದು ನಮ್ಮ ಹಿರಿಯರ ಬಲವಾದ ನಂಬಿಕೆ. ಗೃಹಪ್ರವೇಶ ಮಾಡೋಕೆ, ವ್ಯಾಪಾರ ಶುರು ಮಾಡೋಕೆ, ಹೊಸ ಒಪ್ಪಂದಗಳಿಗೆ ಸಹಿ ಹಾಕೋಕೆ ಇದಕ್ಕಿಂತ ಒಳ್ಳೆ ದಿನ ಮತ್ತೊಂದಿಲ್ಲ ನೋಡಿ.
ಇದನ್ನೂ ಓದಿ: ನಿಮ್ಮ ಮನೇಲಿ ಈ ಪಾತ್ರೆ ಬಳಸ್ತೀರಾ ಇದ್ರೆ.. ಮೊದಲು ಬಿಸಾಕಿ ಆರೋಗ್ಯದ ಅಸಲಿ ಗುಟ್ಟು ಇಲ್ಲಿದೆ.
ಬರೀ ಬೆಲ್ಲ ನುಂಗಿ ಬೇವು ಉಗಿಯೋ ಮುನ್ನ ಇದನ್ನೊಮ್ಮೆ ನೆನಪಿಸ್ಕೊಳ್ಳಿ
ನೋಡಿದ್ರಲ್ಲ ಅಣ್ಣ-ತಮ್ಮಂದಿರೆ, ಅಕ್ಕ-ತಂಗಿಯರೆ, ನಮ್ಮ ಪ್ರತಿಯೊಂದು ಹಬ್ಬದ ಹಿಂದೆಯೂ ಒಂದೊಂದು ಅದ್ಭುತವಾದ, ಅರ್ಥಪೂರ್ಣವಾದ ಕಾರಣ ಖಂಡಿತ ಇರುತ್ತೆ. ನಮ್ಮ ಹಿರಿಯರು ಸುಮ್ನೆ ಬುದ್ಧಿ ಇಲ್ಲದೆ ಯಾವುದೇ ನಿಯಮವನ್ನೂ, ಆಚರಣೆಯನ್ನೂ ನಮ್ಮ ಮೇಲೆ ಹೇರಿಲ್ಲ.
ಅದರ ಹಿಂದೆ ನಮ್ಮೆಲ್ಲರ ಆರೋಗ್ಯ, ನಮ್ಮ ನೆಮ್ಮದಿ ಹಾಗೂ ಈ ಪ್ರಕೃತಿಯ ಜೊತೆಗಿನ ಅದ್ಭುತವಾದ ನಂಟಿದೆ ಅನ್ನೋದನ್ನ ನಾವೆಲ್ಲ ಅರ್ಥ ಮಾಡ್ಕೋಬೇಕು. ಮುಂದಿನ ಸಲ ಯುಗಾದಿ ಹಬ್ಬ ಬಂದಾಗ, ಬರೀ ಸಿಹಿ ಬೆಲ್ಲ ಮಾತ್ರ ತಿಂದು, ಕಹಿ ಬೇವನ್ನ ಆಚೆ ಬಿಸಾಕಬೇಡಿ.
“ದೇಹಕ್ಕೆ ಒಳ್ಳೇದಾಗುತ್ತೆ, ಇದು ನಮ್ಮ ಪ್ರಕೃತಿಯ ವರದಾನ” ಅಂತ ನೆನಪಿಸಿಕೊಂಡು ಒಂದೆರಡು ಕಹಿ ಬೇವಿನ ಎಲೆಗಳನ್ನೂ ಖುಷಿಯಿಂದ ಜಗಿದು ನುಂಗಿ. ಆರೋಗ್ಯಕ್ಕಿಂತ ದೊಡ್ಡ ಭಾಗ್ಯ ಬೇರೇನಿದೆ ಹೇಳಿ?
ಈ ಯುಗಾದಿ ಹಬ್ಬ ನಿಮ್ಮೆಲ್ಲರ ಮನೆ-ಮನಗಳಲ್ಲಿ ಹೊಸ ಬೆಳಕು, ಹೊಸ ಭರವಸೆಯನ್ನ ತರಲಿ. ಭೂಮಿ ತಾಯಿ ತಂಪಾಗಿ, ರೈತರ ಹೊಲ-ಗದ್ದೆಗಳಲ್ಲಿ ಬೆಳೆ ನಳನಳಿಸಲಿ. “ಸರ್ವೇ ಜನಾಃ ಸುಖಿನೋ ಭವಂತು” ಅಂತ ನಮ್ಮ ಹಿರಿಯರು ಹೇಳಿದ ಹಾಗೆ, ನಾಡಿನ ಸಮಸ್ತ ಜನತೆಗೆ ಈ ಹಬ್ಬ ಶುಭವನ್ನು ತರಲಿ.
ನಿಮ್ಮೆಲ್ಲರಿಗೂ ಆ ಭಗವಂತ ಆಯುಸ್ಸು, ಆರೋಗ್ಯ, ಸಂಪತ್ತು ಹಾಗೂ ಸದಾ ಕಾಲ ಸುಖ-ಶಾಂತಿ ಕೊಟ್ಟು ಕಾಪಾಡಲಿ ಅಂತ ತುಂಬು ಹೃದಯದಿಂದ ಬೇಡ್ಕೊಳ್ತೀನಿ. ಎಲ್ಲರಿಗೂ ಒಳ್ಳೇದಾಗಲಿ ಕಣ್ರಪ್ಪ… ನಮಸ್ಕಾರ!