Telegram Join My Telegram WhatsApp Join My WhatsApp

Fridge Food: ಫ್ರಿಡ್ಜ್‌ನಲ್ಲಿಟ್ಟ ಆಹಾರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಾ ಅಥವಾ ಕೆಟ್ಟದ್ದಾ ಇಲ್ಲಿದೆ ಅಚ್ಚರಿಯ ವೈಜ್ಞಾನಿಕ ಸತ್ಯ

Fridge Food: ಫ್ರಿಡ್ಜ್‌ನಲ್ಲಿಟ್ಟ ಆಹಾರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಾ ಅಥವಾ ಕೆಟ್ಟದ್ದಾ ಇಲ್ಲಿದೆ ಅಚ್ಚರಿಯ ವೈಜ್ಞಾನಿಕ ಸತ್ಯ

ಹಿಂದಿನ ಕಾಲದಲ್ಲಿ ನಮ್ಮ ಹಳ್ಳಿಗಳಲ್ಲಿ ಮಣ್ಣಿನ ಮಡಕೆಯಲ್ಲಿ ನೀರು, ಮೊಸರು ಇಟ್ಟು ತಂಪಾಗಿ ಬಳಸುತ್ತಿದ್ದೆವು. ಕತ್ತಲಾದರೆ ಸಾಕು, ಉಳಿದ ಅನ್ನ ಸಾರನ್ನು ಜತನದಿಂದ ಎತ್ತಿಡುತ್ತಿದ್ದೆವು. ಆದರೆ ಈಗ ಕಾಲ ಬದಲಾಗಿದೆ. ಪಟ್ಟಣ ಮಾತ್ರವಲ್ಲ, ನಮ್ಮ ಹಳ್ಳಿ ಹಳ್ಳಿಗಳ ಮೂಲೆ ಮೂಲೆಗೂ ಈಗ ಫ್ರಿಡ್ಜ್ (ರೆಫ್ರಿಜರೇಟರ್) ಬಂದು ಕೂತಿದೆ.

ಫ್ರಿಡ್ಜ್ ಇಲ್ಲದೆ ಒಂದು ದಿನ ಕಳೆಯುವುದು ಕಷ್ಟ ಎಂಬ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ನಮ್ಮ ದಿನನಿತ್ಯದ ಬದುಕಿನಲ್ಲಿ ಇದೊಂದು ದೊಡ್ಡ ಪಾತ್ರ ವಹಿಸುತ್ತಿದೆ.

ಆದರೆ, ನಮ್ಮ ಜನರಲ್ಲಿ ಈಗಲೂ ಕಾಡುತ್ತಿರುವ ಒಂದು ದೊಡ್ಡ ಅನುಮಾನವೆಂದರೆ, ಫ್ರಿಡ್ಜ್‌ನಲ್ಲಿಟ್ಟ ಆಹಾರವನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ ಎಂಬುದು. ಕೆಲವರು ಈ ಕರೆಂಟ್ ಪೆಟ್ಟಿಗೆಯಲ್ಲಿಟ್ಟರೆ ಊಟ ವಿಷ ಆಗುತ್ತೆ ಎನ್ನುತ್ತಾರೆ. ಇನ್ನೂ ಕೆಲವರು ಅದರಲ್ಲಿ ಕೆಮಿಕಲ್ ಸೇರಿಕೊಳ್ಳುತ್ತೆ ಎಂದು ಭಯಪಡುತ್ತಾರೆ.

ನಿಜಕ್ಕೂ ಫ್ರಿಡ್ಜ್‌ನಲ್ಲಿಟ್ಟ ಆಹಾರ ತಿಂದರೆ ಏನಾಗುತ್ತದೆ ಇದರ ಹಿಂದಿನ ಅಸಲಿ ವೈಜ್ಞಾನಿಕ ಸತ್ಯವೇನು ಬನ್ನಿ, ಇವತ್ತು ಎಲ್ಲರಿಗೂ ಅರ್ಥವಾಗುವ ಹಾಗೆ ಅತ್ಯಂತ ಸರಳವಾಗಿ ತಿಳಿದುಕೊಳ್ಳೋಣ.

ಆಹಾರ ಯಾಕೆ ಬೇಗ ಹಾಳಾಗುತ್ತೆ ಗೊತ್ತಾ

ನಮ್ಮ ಕಣ್ಣಿಗೆ ಕಾಣದ ಕೋಟ್ಯಂತರ ಸಣ್ಣ ಸಣ್ಣ ಕ್ರಿಮಿಗಳು, ಅಂದರೆ ಬ್ಯಾಕ್ಟೀರಿಯಾ, ವೈರಸ್ ಹಾಗೂ ಫಂಗಸ್‌ಗಳು ನಮ್ಮ ಸುತ್ತಮುತ್ತ ಗಾಳಿಯಲ್ಲಿ ಸದಾ ಇರುತ್ತವೆ. ಇವುಗಳ ಕೆಲಸವೇನು ಗೊತ್ತಾ ಸದಾ ಏನಾದರೊಂದು ಕೆಲಸ ಮಾಡುತ್ತಲೇ ಇರುವುದು.

ನಾವು ಯಾವುದೇ ತರಕಾರಿ, ಹಣ್ಣು ಅಥವಾ ಬೇಯಿಸಿದ ಆಹಾರವನ್ನು ಹೊರಗಡೆ ತೆರೆದಿಟ್ಟಾಗ, ಈ ಬ್ಯಾಕ್ಟೀರಿಯಾಗಳು ಅದರ ಮೇಲೆ ಕುಳಿತು ತಮ್ಮ ಕೆಲಸ ಶುರು ಮಾಡುತ್ತವೆ. ಇದರಿಂದ ಆಹಾರ ಕೊಳೆಯಲು, ಹುಳಿಯಾಗಲು ಶುರುವಾಗುತ್ತದೆ.

ಒಂದು ಸಣ್ಣ ಉದಾಹರಣೆ ನೋಡ್ರಿ: ನಾವು ಹೊಸ ಮನೆ ಕಟ್ಟಿದಾಗ ಸೆಪ್ಟಿಕ್ ಟ್ಯಾಂಕ್‌ಗೆ ಮೊದಲು ಸಗಣಿ ತಂದು ಹಾಕುತ್ತೇವೆ, ಅಲ್ವಾ ಯಾಕೆಂದರೆ ಆ ಸಗಣಿಯಲ್ಲಿರುವ ಬ್ಯಾಕ್ಟೀರಿಯಾಗಳು ಮುಂದಿನ ತ್ಯಾಜ್ಯವನ್ನು ಕರಗಿಸಿ ಮಣ್ಣಾಗಿಸಲು ಸಹಾಯ ಮಾಡುತ್ತವೆ.

ಇದೇ ರೀತಿಯ ಬ್ಯಾಕ್ಟೀರಿಯಾಗಳು ನಮ್ಮ ಆಹಾರವನ್ನು ಕೂಡ ಕೆಡಿಸುತ್ತವೆ. ಒಂದು ಸತ್ತ ಪ್ರಾಣಿ ಅಥವಾ ಕತ್ತರಿಸಿ ಹೊರಗಿಟ್ಟ ತರಕಾರಿ ಮಣ್ಣಾಗಲು ಇದೇ ಬ್ಯಾಕ್ಟೀರಿಯಾಗಳು ಮುಖ್ಯ ಕಾರಣ.

ಇದನ್ನೂ ಓದಿ: ಸರ್ಕಾರಿ ಶಾಲೆ ಶಿಕ್ಷಕರ ವರ್ಗಾವಣೆ: ಏನಿದು 2026ರ ಹೊಸ ಕಡಕ್ ರೂಲ್ಸ್ ನ ಬಗ್ಗೆ ಸಂಪೂರ್ಣ ಮಾಹಿತಿ

ಫ್ರಿಡ್ಜ್ ಒಳಗೆ ಮ್ಯಾಜಿಕ್ ನಡೆಯುತ್ತಾ

ಈ ಬ್ಯಾಕ್ಟೀರಿಯಾಗಳು ಚಕಚಕನೆ ಕೆಲಸ ಮಾಡಬೇಕಾದರೆ, ಅದಕ್ಕೆ ತಕ್ಕಂಥ ಬಿಸಿ ಅಥವಾ ವಾತಾವರಣ ಬೇಕು. ಸಾಮಾನ್ಯವಾಗಿ 4.5 ಡಿಗ್ರಿಯಿಂದ 60 ಡಿಗ್ರಿ ಸೆಲ್ಸಿಯಸ್ ವಾತಾವರಣ ಇದ್ದರೆ, ಈ ಕ್ರಿಮಿಗಳು ಅತಿ ವೇಗವಾಗಿ ಬೆಳೆಯುತ್ತವೆ ಮತ್ತು ತಮ್ಮ ಸಂತತಿ ಹೆಚ್ಚಿಸಿಕೊಳ್ಳುತ್ತವೆ.

ಆದರೆ, ಫ್ರಿಡ್ಜ್‌ನ ಒಳಗಿನ ಕಥೆಯೇ ಬೇರೆ. ಅಲ್ಲಿನ ವಾತಾವರಣ ವಿಪರೀತ ತಂಪಾಗಿರುತ್ತದೆ. ಯಾವಾಗ ವಾತಾವರಣ ತಂಪಾಗುತ್ತದೆಯೋ, ಆಗ ಈ ಬ್ಯಾಕ್ಟೀರಿಯಾಗಳ ಕೈಕಾಲು ಕಟ್ಟಿದಂತೆ ಆಗುತ್ತದೆ. ಅವುಗಳ ಚಟುವಟಿಕೆ ಸಂಪೂರ್ಣವಾಗಿ ನಿಧಾನವಾಗುತ್ತದೆ.

ಫ್ರಿಡ್ಜ್ ಒಳಗೆ ಸಮಯ ನಿಧಾನವಾಗಿ ಚಲಿಸಿದಂತೆ ಆಗುತ್ತದೆ. ಆದ್ದರಿಂದ, ಫ್ರಿಡ್ಜ್‌ನಲ್ಲಿಟ್ಟ ಆಹಾರದ ಮೇಲೆ ದಾಳಿ ಮಾಡಲು ಬ್ಯಾಕ್ಟೀರಿಯಾಗಳಿಗೆ ಆಗುವುದಿಲ್ಲ. ಹೀಗಾಗಿ ನಮ್ಮ ಊಟ ಬೇಗನೆ ಹಾಳಾಗುವುದಿಲ್ಲ ಅಷ್ಟೇ. ಇದರಲ್ಲಿ ಬೇರೆ ಯಾವ ಮ್ಯಾಜಿಕ್ ಕೂಡ ಇಲ್ಲ

ಫ್ರಿಡ್ಜ್‌ನಲ್ಲಿ ಎರಡು ಭಾಗ ಯಾಕಿರುತ್ತೆ

ನಮ್ಮ ಫ್ರಿಡ್ಜ್‌ನಲ್ಲಿ ಮುಖ್ಯವಾಗಿ ಎರಡು ಬೇರೆ ಬೇರೆ ಭಾಗಗಳಿರುತ್ತವೆ. ಇವೆರಡರ ಕೆಲಸವೂ ಬೇರೆ ಬೇರೆ:

  • ರೆಫ್ರಿಜರೇಟರ್ (ಕೆಳಗಿನ ಭಾಗ): ಇದರ ತಾಪಮಾನ ಸಾಮಾನ್ಯವಾಗಿ 4 ಡಿಗ್ರಿ ಇರುತ್ತದೆ. ಇಲ್ಲಿ ನಾವು ದಿನನಿತ್ಯದ ತರಕಾರಿ, ಹಣ್ಣುಗಳು, ಹಾಲು, ಮೊಸರು ಮತ್ತು ಉಳಿದ ಬೇಯಿಸಿದ ಆಹಾರವನ್ನು ಇಡಬಹುದು. ಇಲ್ಲಿ ಬ್ಯಾಕ್ಟೀರಿಯಾಗಳ ವೇಗ ತೀರಾ ಕಡಿಮೆಯಾಗುತ್ತದೆ.

  • ಡೀಪ್ ಫ್ರೀಜರ್ (ಐಸ್ ಗಡ್ಡೆ ಕಟ್ಟುವ ಜಾಗ): ಇದರ ತಾಪಮಾನ ಬರೋಬ್ಬರಿ -18 ಡಿಗ್ರಿ ಇರುತ್ತದೆ ಇಲ್ಲಿ ಮುಖ್ಯವಾಗಿ ಮಾಂಸಾಹಾರ (ಚಿಕನ್, ಮಟನ್, ಮೀನು) ಇಡಲಾಗುತ್ತದೆ. ಇಲ್ಲಿ ತಾಪಮಾನ ಅತಿ ಕಡಿಮೆ ಇರುವುದರಿಂದ, ಬ್ಯಾಕ್ಟೀರಿಯಾಗಳ ಆಟ ಸಂಪೂರ್ಣವಾಗಿ ಬಂದ್ ಆಗುತ್ತದೆ.

ಊಟ ಪ್ರಿಡ್ಜ್ ನಲ್ಲಿ ಇಟ್ಟರೆ ಏನಾಗುತ್ತೆ

ಬಹಳಷ್ಟು ಜನ ಕೇಳುವ ಪ್ರಶ್ನೆ ಇದು. ಫ್ರಿಡ್ಜ್‌ನಲ್ಲಿ ಇಟ್ಟರೆ ಆಹಾರದ ಪೋಷಕಾಂಶಗಳು (Nutrients) ನಾಶವಾಗುತ್ತವೆ ಎಂಬುದು ಬಹುತೇಕರ ದೊಡ್ಡ ತಪ್ಪು ಕಲ್ಪನೆ.

ವಾಸ್ತವದಲ್ಲಿ, ಆಹಾರವನ್ನು ಅತಿ ಹೆಚ್ಚು ಉರಿಯಲ್ಲಿ ಒಲೆಯ ಮೇಲೆ ಬೇಯಿಸಿದಾಗ ಮಾತ್ರ ಅದರಲ್ಲಿರುವ ಅತಿ ಹೆಚ್ಚು ಸತ್ವಗಳು ನಾಶವಾಗುತ್ತವೆ.

ಫ್ರಿಡ್ಜ್‌ನ ತಂಪಾದ ವಾತಾವರಣದಲ್ಲಿ ಯಾವುದೇ ವಿಟಮಿನ್ ಅಥವಾ ಮಿನರಲ್‌ಗಳು ಹಾಳಾಗುವುದಿಲ್ಲ. ಅವು ಹಾಗೆಯೇ ಸುರಕ್ಷಿತವಾಗಿ ಉಳಿದುಕೊಳ್ಳುತ್ತವೆ.

ಆದರೆ, ಇಲ್ಲಿ ನಾವು ಮಾಡಬಾರದ ಒಂದು ತಪ್ಪು ಇದೆ. ಫ್ರಿಡ್ಜ್‌ನಿಂದ ತಂಪಾದ ಊಟ ತೆಗೆದು, ಪದೇ ಪದೇ ಒಲೆಯ ಮೇಲೆ ಬಿಸಿ ಮಾಡಿ (Reheating) ತಿಂದರೆ ಪೋಷಕಾಂಶಗಳು ಕಡಿಮೆಯಾಗುವ ಸಾಧ್ಯತೆ ಖಂಡಿತ ಇದೆ.

ಇದಕ್ಕೊಂದು ಸರಳ ಉಪಾಯ: ಒಮ್ಮೆ ಫ್ರಿಡ್ಜ್‌ನಿಂದ ಪಾತ್ರೆ ತೆಗೆದರೆ, ನಿಮಗೆ ಆ ಹೊತ್ತಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಬೇರೆ ಪಾತ್ರೆಗೆ ತೆಗೆದುಕೊಂಡು ಬಿಸಿ ಮಾಡಿ. ಉಳಿದದ್ದನ್ನು ಹಾಗೆಯೇ ಒಳಗೆ ಇಡಿ. ಪದೇ ಪದೇ ಇಡೀ ಪಾತ್ರೆಯನ್ನು ಬಿಸಿ ಮಾಡಬೇಡಿ.

ಇದನ್ನೂ ಓದಿ:  ಬರೀ ಒಂದು ಮಿಸ್ಡ್ ಕಾಲ್ ಕೊಡಿ: ಎಸ್‌ಬಿಐ (SBI) ಯಿಂದ ಮನೆಬಾಗಿಲಿಗೆ ಬರಲಿದೆ ₹50 ಲಕ್ಷದವರೆಗಿನ ಸಾಲ

ಫ್ರಿಡ್ಜ್‌ನಿಂದ ಆಹಾರಕ್ಕೆ ಕೆಮಿಕಲ್ ಸೇರುತ್ತಾ

ಹಳ್ಳಿಗಳಲ್ಲಿ ಕೆಲವರು ಹೇಳುತ್ತಾರೆ, ಅದರಾಗೆ ಗ್ಯಾಸ್ ಇರುತ್ತೆ, ಅದು ಊಟಕ್ಕೆ ಸೇರಿ ನಮಗೆ ಕಾಯಿಲೆ ಬರುತ್ತೆಅಂತ. ಇದು ಶುದ್ಧ ಸುಳ್ಳು ಫ್ರಿಡ್ಜ್‌ನಲ್ಲಿ ಬಳಸುವ ಗ್ಯಾಸ್ ಕೇವಲ ಯಂತ್ರದ ಪೈಪುಗಳ ಒಳಗೆ ಹರಿಯುತ್ತದೆ.

ಅದರ ಕೆಲಸ ಕೇವಲ ಒಳಗಿನ ಶಾಖವನ್ನು ಹೀರಿಕೊಂಡು ವಾತಾವರಣವನ್ನು ತಂಪು ಮಾಡುವುದು ಮಾತ್ರ. ಯಾವುದೇ ಕಾರಣಕ್ಕೂ ಈ ಕೆಮಿಕಲ್ ನೇರವಾಗಿ ನಿಮ್ಮ ಆಹಾರದ ಸಂಪರ್ಕಕ್ಕೆ ಬರುವುದೇ ಇಲ್ಲ.

ಹಾಗಾಗಿ, ಫ್ರಿಡ್ಜ್‌ನಲ್ಲಿಟ್ಟ ಆಹಾರದಲ್ಲಿ ಯಾವುದೇ ರೀತಿಯ ಅಪಾಯಕಾರಿ ರಾಸಾಯನಿಕ (Chemical) ಬದಲಾವಣೆಗಳು ಆಗುವುದಿಲ್ಲ. ಇದು ನಿಮ್ಮ ಹಾಗೂ ನಿಮ್ಮ ಮಕ್ಕಳ ಆರೋಗ್ಯಕ್ಕೆ ಸಂಪೂರ್ಣವಾಗಿ ಸೇಫ್ ಆಗಿದೆ.

ಹಸಿ ತರಕಾರಿ ಮತ್ತು ಮಾಂಸವನ್ನು ಹೇಗೆ ಇಡಬೇಕು

ಫ್ರಿಡ್ಜ್ ಇದೆ ಎಂದು ತಂದದ್ದನ್ನೆಲ್ಲಾ ಸುಮ್ಮನೆ ಹಾಗೆ ಎಸೆಯಬಾರದು.

  • ತರಕಾರಿಗಳ ಕಥೆ: ಒಂದು ಸೌತೆಕಾಯಿ ಅಥವಾ ಬದನೆಕಾಯಿಯನ್ನು ಗಿಡದಿಂದ ಕತ್ತರಿಸಿ ತಂದರೂ, ಅದರಲ್ಲಿ ಜೀವ ಇರುತ್ತದೆ. ಅದು ಉಸಿರಾಡುತ್ತಿರುತ್ತದೆ. (ಉದಾಹರಣೆಗೆ: ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದು ಅದು ತನ್ನನ್ನು ತಾನು ರಕ್ಷಿಸಿಕೊಳ್ಳಲು ಬಿಡುವ ರಾಸಾಯನಿಕದಿಂದ).

  • ತರಕಾರಿ ಇಡುವ ಸರಿಯಾದ ಕ್ರಮ: ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ಇಡುವಾಗ ಗಾಳಿಯಾಡದ (Airtight) ಪ್ಲಾಸ್ಟಿಕ್ ಕವರ್ ಅಥವಾ ಮುಚ್ಚಳವಿರುವ ಡಬ್ಬಿಗಳಲ್ಲಿ ಇಡುವುದು ಬಹಳ ಉತ್ತಮ.

  • ಮಾಂಸಾಹಾರದ ಕಥೆ: ಚಿಕನ್ ಅಥವಾ ಮೀನು ತಂದಾಗ, ಅದರಲ್ಲಿ ಜೀವ ಇರುವುದಿಲ್ಲ. ರಕ್ತಸಂಚಾರ ನಿಂತಿರುತ್ತದೆ. ಹಾಗಾಗಿ ಅದು ಬೇಗನೆ ಕೊಳೆಯುತ್ತದೆ.

  • ಮಾಂಸ ಇಡುವ ಸರಿಯಾದ ಕ್ರಮ: ಮಾಂಸಾಹಾರವನ್ನು ತಂದ ತಕ್ಷಣ ಮೇಲಿನ ಡೀಪ್ ಫ್ರೀಜರ್‌ನಲ್ಲಿ (ಐಸ್ ಆಗುವ ಜಾಗದಲ್ಲಿ) ಇಡುವುದು ಅತ್ಯಂತ ಸುರಕ್ಷಿತ. ಕೆಳಗಡೆ ಇಟ್ಟರೆ ಬೇಗ ಹಾಳಾಗುತ್ತದೆ.

ಫ್ರಿಡ್ಜ್‌ ಬಳಸುವಾಗ ಪಾಲಿಸಲೇಬೇಕಾದ 5 ನಿಯಮಗಳು

ಫ್ರಿಡ್ಜ್‌ ಇದೆ ಎಂದು ಸಿಕ್ಕಸಿಕ್ಕದ್ದನ್ನೆಲ್ಲಾ ತುಂಬಿಸಿ ಕಪಾಟಿನ ತರಹ ಮಾಡಬಾರದು. ಈ ಕೆಳಗಿನ ನಿಯಮಗಳನ್ನು ನೆನಪಿಟ್ಟುಕೊಳ್ಳಿ:

  • ಮುಚ್ಚಳ ಕಡ್ಡಾಯ: ಒಮ್ಮೆ ಬೇಯಿಸಿದ ಅನ್ನ, ಸಾರು, ಪಲ್ಯವನ್ನು ಯಾವತ್ತೂ ತೆರೆದಿಡಬಾರದು. ಕಡ್ಡಾಯವಾಗಿ ಮುಚ್ಚಳವಿರುವ ಪಾತ್ರೆಯಲ್ಲಿ ಅಥವಾ ಡಬ್ಬಿಯಲ್ಲಿ ಮಾತ್ರ ಇಡಬೇಕು.

  • ಎಷ್ಟು ದಿನ ಇಡಬಹುದು?: ಯಾವುದೇ ಬೇಯಿಸಿದ ಆಹಾರವನ್ನು ವಾರಗಟ್ಟಲೆ, ತಿಂಗಳುಗಟ್ಟಲೆ ಫ್ರಿಡ್ಜ್‌ನಲ್ಲಿ ಇಟ್ಟು ತಿನ್ನುವುದು ಆರೋಗ್ಯಕ್ಕೆ ಸ್ವಲ್ಪವೂ ಒಳ್ಳೆಯದಲ್ಲ. ಆದಷ್ಟು 3-4 ದಿನಗಳೊಳಗೆ ಬಳಸಿ ಮುಗಿಸಿ.

  • ಐಸ್ ಕರಗಿದಾಗ ಎಚ್ಚರ: ಡೀಪ್ ಫ್ರೀಜರ್‌ನಿಂದ ಮಾಂಸವನ್ನು ಹೊರತೆಗೆದಾಗ ಅದರಲ್ಲಿರುವ ಐಸ್ ಕರಗುತ್ತದೆ. ಆಗ ಮಾಂಸದ ಜೀವಕೋಶಗಳು ಒಡೆಯುತ್ತವೆ. ಹಾಗಾಗಿ ಫ್ರಿಡ್ಜ್‌ನಿಂದ ಹೊರತೆಗೆದ ಮಾಂಸವನ್ನು ಮತ್ತೆ ತುಂಬಾ ಹೊತ್ತು ಹೊರಗಿಡಬಾರದು, ತಕ್ಷಣ ಒಲೆಗೆ ಏರಿಸಿ ಬೇಯಿಸಬೇಕು.

  • ಹಸಿ ಮತ್ತು ಬೇಯಿಸಿದ ಆಹಾರ ಬೇರೆ ಇಡಿ: ಹಸಿ ತರಕಾರಿ ಅಥವಾ ಹಸಿ ಮಾಂಸವನ್ನು, ಬೇಯಿಸಿದ ಆಹಾರದ ಪಕ್ಕದಲ್ಲಿ ಇಡಬಾರದು.

  • ಫ್ರಿಡ್ಜ್ ಸ್ವಚ್ಛತೆ ಅತಿ ಮುಖ್ಯ: ವಾರಕ್ಕೊಮ್ಮೆ ಫ್ರಿಡ್ಜ್ ಅನ್ನು ಕಡ್ಡಾಯವಾಗಿ ಒರೆಸಿ ಸ್ವಚ್ಛಗೊಳಿಸಿ. ಒಳಗಿರುವ ಹಳೆಯ, ಹಾಳಾದ ವಸ್ತುಗಳನ್ನು ಮುಲಾಜಿಲ್ಲದೆ ಬಿಸಾಡಿ. ಫ್ರಿಡ್ಜ್ ಕ್ಲೀನ್ ಇದ್ದರೆ, ನಿಮ್ಮ ಆರೋಗ್ಯವೂ ಕ್ಲೀನ್!

ಫ್ರಿಡ್ಜ್‌ನಿಂದ ನಮಗಾಗುವ ಅದ್ಭುತ ಲಾಭಗಳೇನು ಗೊತ್ತಾ

ಫ್ರಿಡ್ಜ್‌ನಿಂದ ಕೇವಲ ತಂಪು ನೀರು ಮಾತ್ರ ಸಿಗುತ್ತೆ ಅಂದುಕೊಂಡರೆ ತಪ್ಪು. ಇದರಿಂದ ಎಷ್ಟೋ ಲಾಭಗಳಿವೆ:

  • ರೋಗಗಳಿಂದ ರಕ್ಷಣೆ: ಕಾಲರಾ, ಟೈಫಾಯ್ಡ್, ಮತ್ತು ಫುಡ್ ಪಾಯಿಸನ್‌ನಂತಹ ಅನೇಕ ಭಯಾನಕ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಈ ಫ್ರಿಡ್ಜ್ ಪ್ರಮುಖ ಪಾತ್ರ ವಹಿಸಿದೆ.

  • ದೂರದ ಹಣ್ಣುಗಳು ಲಭ್ಯ: ಕಾಶ್ಮೀರದ ಸೇಬು ಆಗಲಿ, ವಿದೇಶದ ಹಣ್ಣುಗಳಾಗಲಿ ಇಂದು ನಮ್ಮ ಹಳ್ಳಿಗಳಿಗೂ ತಾಜಾವಾಗಿ ಬಂದು ತಲುಪಲು ಈ ಫ್ರಿಡ್ಜ್‌ಗಳೇ ಕಾರಣ.

  • ತಾಯಂದಿರಿಗೆ ಬಿಡುವು: ಹಿಂದಿನ ಕಾಲದಲ್ಲಿ ಮನೆಯ ಹೆಣ್ಣುಮಕ್ಕಳು ಸದಾ ಒಲೆಯ ಮುಂದೆಯೇ ಇರಬೇಕಿತ್ತು. ಆದರೆ ಈಗ ಫ್ರಿಡ್ಜ್ ಮತ್ತು ಪ್ರೆಶರ್ ಕುಕ್ಕರ್ ಬಂದ ಮೇಲೆ, ಮನೆಯ ತಾಯಂದಿರಿಗೆ ಸ್ವಲ್ಪ ಬಿಡುವು ಸಿಕ್ಕಿದೆ. ಅವರು ತಮ್ಮ ಮಕ್ಕಳೊಡನೆ ಕಾಲ ಕಳೆಯಲು ಸಾಧ್ಯವಾಗಿದೆ.

  • ಪಟ್ಟಣದ ಜನರಿಗೆ ವರದಾನ: ಸಿಟಿಯಲ್ಲಿ ವಾಸಿಸುವವರಿಗೆ ದಿನಬೆಳಗಾದರೆ ತಾಜಾ ಹಾಲು, ಮೊಸರು, ಮತ್ತು ತರಕಾರಿಗಳು ಕೆಡದಂತೆ ಉಳಿಯಲು ಫ್ರಿಡ್ಜ್ ಬಹಳ ದೊಡ್ಡ ಆಸರೆಯಾಗಿದೆ.

ಇದನ್ನೂ ಓದಿ: Gruha Jyothi Scheme: ಗೃಹ ಜ್ಯೋತಿ ಯೋಜನೆ ಉಚಿತ ವಿದ್ಯುತ್ ಲೆಕ್ಕಾಚಾರ 200 ಯೂನಿಟ್ ಫ್ರೀ ಅಸಲಿ ಸತ್ಯ ಇಲ್ಲಿದೆ 

ಭಯ ಬಿಡಿ ಫ್ರಿಡ್ಜ್ ಬಳಸಿ

ಒಟ್ಟಾರೆಯಾಗಿ ಹೇಳುವುದಾದರೆ, ಫ್ರಿಡ್ಜ್‌ನಲ್ಲಿಟ್ಟ ಆಹಾರ ಸೇವಿಸುವುದು ಖಂಡಿತವಾಗಿಯೂ ಆರೋಗ್ಯಕ್ಕೆ ಹಾನಿಕಾರಕವಲ್ಲ. ಇದೊಂದು ಅದ್ಭುತವಾದ ಯಂತ್ರ. ಇದು ಕೇವಲ ತಾಪಮಾನವನ್ನು ಕಡಿಮೆ ಮಾಡುವ ಮೂಲಕ ನಮ್ಮ ಅನ್ನ, ಸಾರು ಕೆಡದಂತೆ, ಕಣ್ಣಿಗೆ ಕಾಣದ ಬ್ಯಾಕ್ಟೀರಿಯಾಗಳಿಂದ ಕಾಪಾಡುತ್ತದೆ.

ಯಾವುದೇ ಕೆಮಿಕಲ್ ರಿಯಾಕ್ಷನ್ ಆಗಲಿ ಅಥವಾ ಪೋಷಕಾಂಶಗಳ ನಷ್ಟವಾಗಲಿ ಇಲ್ಲಿ ಉಂಟಾಗುವುದಿಲ್ಲ. ನೀವು ಆರಾಮಾಗಿ, ನಿರ್ಭಯವಾಗಿ ಫ್ರಿಡ್ಜ್ ಬಳಸಬಹುದು.

ಆದರೆ, ಅತಿಯಾಸೆ ಮಾಡಿ ಸಿಕ್ಕಿದ್ದನ್ನೆಲ್ಲಾ ತುಂಬಿಸಿ, ವಾರಗಟ್ಟಲೆ, ತಿಂಗಳುಗಟ್ಟಲೆ ಆಹಾರವನ್ನು ಶೇಖರಿಸಿಟ್ಟು ತಿನ್ನುವ ಕೆಟ್ಟ ಅಭ್ಯಾಸವನ್ನು ನಾವು ಬಿಡಬೇಕು.

ತಾಜಾ ಆಹಾರವನ್ನು ಮಿತಿಯಾಗಿ ಫ್ರಿಡ್ಜ್‌ಗೆ ಇಡಿ, ಸರಿಯಾದ ರೀತಿಯಲ್ಲಿ, ಸ್ವಚ್ಛವಾಗಿ ಬಳಸಿ. ಆಗ ನಮ್ಮ ಮತ್ತು ನಮ್ಮ ಮನೆಯವರ ಆರೋಗ್ಯವೂ ಸುಭದ್ರವಾಗಿರುತ್ತದೆ.

ಹಾಗಾಗಿ, ಊರಿಗೊಂದು, ಕೇರಿಗೊಂದು ಹುಟ್ಟಿಕೊಳ್ಳುವ ಆಧಾರರಹಿತ ವದಂತಿಗಳಿಗೆ ಕಿವಿಗೊಡಬೇಡಿ. ನಿರ್ಭಯವಾಗಿ ತಾಜಾ ಆಹಾರವನ್ನು ಫ್ರಿಡ್ಜ್‌ ಬಳಸಿ ಸಂರಕ್ಷಿಸಿ, ಆರೋಗ್ಯವಾಗಿರಿ

Leave a Comment