Telegram Join My Telegram WhatsApp Join My WhatsApp

2 ಎಕರೆಯಲ್ಲಿ 10 ಲಕ್ಷ ಆದಾಯ ತರುವ ಬಂಗಾರದ ಬೆಳೆ: ಅರ್ಕ ಸಹನ ಸೀತಾಫಲ ಕೃಷಿ

2 ಎಕರೆಯಲ್ಲಿ 10 ಲಕ್ಷ ಆದಾಯ ತರುವ ಬಂಗಾರದ ಬೆಳೆ: ಅರ್ಕ ಸಹನ ಸೀತಾಫಲ ಕೃಷಿ

ನಮಸ್ಕಾರ ರೈತ ಬಾಂಧವರೇ! ನಮ್ಮ ಕರುನಾಡಿನ ಮಣ್ಣಿನಲ್ಲಿ ಅದೆಷ್ಟೋ ಬಂಗಾರದಂತ ಬೆಳೆ ತೆಗೆಯುವ ತಾಕತ್ತಿದೆ ಅನ್ನೋದಕ್ಕೆ ನಮ್ಮ ನಾಡಿನ ರೈತರೇ ಜೀವಂತ ಸಾಕ್ಷಿ.

ಇವತ್ತು ನಾನು ನಿಮಗೆ ಒಂದು ಅದ್ಭುತವಾದ ಕೃಷಿ ಮಾಹಿತಿಯನ್ನು ಹೊತ್ತು ತಂದಿದ್ದೇನೆ. ವ್ಯವಸಾಯದಲ್ಲಿ ಹೊಸದೇನಾದರೂ ಮಾಡಬೇಕು, ಕಡಿಮೆ ನೀರಿನಲ್ಲಿ ಹೆಚ್ಚು ಲಾಭ ಗಳಿಸಬೇಕು ಎಂದುಕೊಂಡಿರುವ ಯುವಕರಿಗೆ ಮತ್ತು ರೈತರಿಗೆ ಇದೊಂದು ಅದ್ಭುತವಾದ ಸುವರ್ಣ ಅವಕಾಶ ಎಂದೇ ಹೇಳಬಹುದು.

ವಿಜಯಪುರ (ಬಿಜಾಪುರ) ಜಿಲ್ಲೆ, ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದ ರೈತ ಶಿವಯೋಗಿ ನಿಂಗಪ್ಪಮೂಡಗಿ ಅವರ ಕೃಷಿ ಸಾಧನೆ ಇದು. ಇವರು ಬೆಳೆದಿರುವ ‘ಸೀತಾಫಲ’ ತೋಟ ನೋಡಿದ್ರೆ ಎಂಥವರಿಗಾದರೂ ಮೈ ಜುಮ್ ಅನ್ನುತ್ತೆ. ಬನ್ನಿ,ಈ ಕೃಷಿಯ ಸಂಪೂರ್ಣ ವಿವರವನ್ನು ಒಂದೊಂದಾಗಿ ತಿಳಿಯೋಣ.

ರಾಜಕೀಯ ಬಿಟ್ಟು ಕೃಷಿಯತ್ತ ಒಲವು

ನಮ್ಮ ಶಿವಯೋಗಿ ನಿಂಗಪ್ಪನವರು ಸುಮ್ನೆ ಸಾಧಾರಣ ಮನುಷ್ಯರಲ್ಲಬಿಡಿ. 2000ನೇ ಇಸವಿಯಿಂದ 2005ರ ವರೆಗೆ ಸಿಂದಗಿ ತಾಲೂಕು ಪಂಚಾಯಿತಿ ಮೆಂಬರ್ ಆಗಿ ಊರಿನ ಜನ್ರ ಸೇವೆ ಮಾಡಿದವರು. ಆದರೇನು, ರಾಜಕೀಯದ ಗೀಳಿದ್ದರೂ ಅವರ ಜೀವ ಮಿಡಿಯುತ್ತಾ ಇದ್ದದ್ದು ಮಾತ್ರ ನಮ್ಮ ಕರುನಾಡ ಮಣ್ಣಿಗೆ.

‘ಅದೆಷ್ಟೇ ದೊಡ್ಡ ಹುದ್ದೆಯಲ್ಲಿದ್ರೂ, ಸ್ವಂತ ಜಮೀನಲ್ಲಿ ಬೆವರು ಸುರಿಸಿ ದುಡಿಯೋ ಮಜಾನೇ ಬೇರೆ’ ಅಂತ ಅವರು ಅಂದುಕೊಂಡರು. ಕೃಷಿಯಲ್ಲಿ ಏನಾದ್ರೂ ಒಂದು ಹೊಸ ಸಾಧನೆ ಮಾಡಲೇಬೇಕು ಅಂತ ಗಟ್ಟಿಯಾಗಿ ಪಣತೊಟ್ಟರು.

ಸರಿಯಾಗಿ ಅದೇ ಟೈಮಲ್ಲಿ, ಪರಿಚಯದ ಬೇರೊಬ್ಬ ರೈತ ಕೇವಲ ಒಂದು ಎಕರೆ ಜಮೀನಲ್ಲಿ ಸೀತಾಫಲ ಬೆಳೆದು ಬರೋಬ್ಬರಿ 7-8 ಲಕ್ಷ ರೂಪಾಯಿ ಲಾಭ ಎಣಿಸಿದ್ದನ್ನ ಇವರು ಕಣ್ಣಾರೆ ನೋಡಿದ್ರು.

ಅಷ್ಟೇ ನೋಡಿ, ‘ಅವರು ಮಾಡಿರೋವಾಗ ನಾನೇಕೆ ಮಾಡಬಾರದು?’ ಅಂತ ಇವರ ಮೈಯಲ್ಲಿ ಹೊಸ ಹುಮ್ಮಸ್ಸು ಬಂತು.ಅದೇ ಸ್ಫೂರ್ತಿಯಿಂದ ನೇರವಾಗಿ ಈ ಸೀತಾಫಲದ ತೋಟ ಮಾಡೋಕೆ ಅಖಾಡಕ್ಕೆ ಇಳಿದೇ ಬಿಟ್ಟರು!

ಇದನ್ನೂ ಓದಿ:  ಓದಿದ್ದು ಬರೀ SSLC ನಾ? ಚಿಂತೆ ಬಿಡಿ ಪರೀಕ್ಷೆ ಇಲ್ಲದೆ ಸಿಗ್ತಿದೆ ಸರ್ಕಾರಿ ಕೆಲಸ! ಚಾಮರಾಜನಗರ ನ್ಯಾಯಾಲಯ ನೇಮಕಾತಿ-2026

ಅರ್ಕ ಸಹನ ಸೀತಾಫಲ – ಇದು ಮಣ್ಣಿಗೆ ಒಗ್ಗಿದ ಬಂಗಾರ!

ಶಿವಯೋಗಿ ಅವರು ತಮ್ಮ ಒಟ್ಟು 4 ಎಕರೆ ಜಮೀನಿನಲ್ಲಿ, ಕೇವಲ 2 ಎಕರೆ 12 ಗುಂಟೆ ಜಾಗವನ್ನು ‘ಅರ್ಕ ಸಹನ’ (Arka Sahan) ತಳಿಯ ಸೀತಾಫಲ ಬೆಳೆಯಲು ಮೀಸಲಿಟ್ಟಿದ್ದಾರೆ.

  • 2019 ರ ಮೇ ತಿಂಗಳಲ್ಲಿ ಇವರು ಈ ಗಿಡಗಳನ್ನು ನಾಟಿ ಮಾಡಿದರು.

  • ಒಂದು ಸಸಿಗೆ ಕೇವಲ 12 ರೂಪಾಯಿ ಕೊಟ್ಟು ತಂದಿದ್ದರು.

  • ಒಟ್ಟು 530 ಗಿಡಗಳನ್ನು ನೆಟ್ಟಿದ್ದಾರೆ. ಅದರಲ್ಲಿ 480 ಗಿಡಗಳು ‘ಅರ್ಕ ಸಹನ’ ತಳಿಯಾದರೆ, ಉಳಿದ 50 ಗಿಡಗಳು ‘ಬಾಲಾನಗರ’ ತಳಿಯವು.

ಈಗ ಈ ಗಿಡಗಳಿಗೆ ಸರಿಯಾಗಿ ಆರು ವರ್ಷ ವಯಸ್ಸು. ಇದು ಅವರು ಪಡೆಯುತ್ತಿರುವ ಮೂರನೇ ವರ್ಷದ ಭರ್ಜರಿ ಫಸಲು. ಸೀತಾಫಲ ಎಂದರೆ ನಮಗೆಲ್ಲಾ ಕಾಡಿನಲ್ಲಿ, ಗುಡ್ಡ ಬೆಟ್ಟದಲ್ಲಿ ಸಿಗುವ ಜವಾರಿ ಹಣ್ಣು, ಅದರಲ್ಲಿ ಬರೀ ಬೀಜ ಇರುತ್ತೆ ಎಂಬ ಭಾವನೆ ಇದೆ. ಆದರೆ ಈ ‘ಅರ್ಕ ಸಹನ’ ತಳಿಯ ಹಣ್ಣು ನೋಡೋಕೂ ಚಂದ, ತಿನ್ನೋಕೂ ಬಲು ರುಚಿ.

ಎಷ್ಟಿದೆ ಆದಾಯ? ಬೆಲೆ ಕೇಳಿದ್ರೆ ನೀವೇ ಬೆರಗಾಗ್ತೀರಾ!

ರೈತರಿಗೆ ಮುಖ್ಯವಾಗಿ ಬೇಕಾಗಿರುವುದು ತಕ್ಕ ಬೆಲೆ. ಈ ಹಣ್ಣಿಗೆ ಮಾರ್ಕೆಟ್‌ನಲ್ಲಿ ಎಲ್ಲಿಲ್ಲದ ಡಿಮ್ಯಾಂಡ್ ಇದೆ.

  • ಈ ‘ಅರ್ಕ ಸಹನ’ ತಳಿಯ ಹಣ್ಣು ನೇರವಾಗಿ ಕೆಜಿಗೆ ಬರೋಬ್ಬರಿ 165 ರೂಪಾಯಿಗೆ ಮಾರಾಟವಾಗುತ್ತಿದೆ.

  • ಹಣ್ಣಿನ ಗುಣಮಟ್ಟ ನೋಡಿ ಮುಂದಿನ ದಿನಗಳಲ್ಲಿ 180 ರಿಂದ 200 ರೂಪಾಯಿಗೂ ಮಾರಾಟವಾಗುವ ಸಾಧ್ಯತೆ ಇದೆ.

  • ಈ ವರ್ಷ ಅವರ ತೋಟದಲ್ಲಿ ಬರೋಬ್ಬರಿ 6 ರಿಂದ 8 ಟನ್ ಇಳುವರಿ ಬರುವ ನಿರೀಕ್ಷೆ ಇದೆ.

  • ಮಧ್ಯವರ್ತಿಗಳ ಕಾಟವಿಲ್ಲದೆ, ಕಮಿಷನ್ ರಹಿತವಾಗಿ ನೇರವಾಗಿ ಬೆಂಗಳೂರಿಗೆ ಕಳುಹಿಸುವುದರಿಂದ ಅವರಿಗೆ ಅಂದಾಜು 10 ಲಕ್ಷ ರೂಪಾಯಿಗಳಿಗೂ ಅಧಿಕ ನಿವ್ವಳ ಲಾಭ ಸಿಗುತ್ತಿದೆ.

  • ಮುಂದಿನ ವರ್ಷ ಮರಗಳು ಇನ್ನೂ ದೊಡ್ಡದಾಗುವುದರಿಂದ, 16 ಟನ್‌ಗೂ ಹೆಚ್ಚು ಇಳುವರಿ ಬಂದು, 16 ರಿಂದ 20 ಲಕ್ಷ ಲಾಭ ಗಳಿಸುವ ಭರವಸೆ ಇವರಿಗಿದೆ.

ಹಣ್ಣಿನ ಸೈಜು ಎಷ್ಟಿರುತ್ತೆ ಗೊತ್ತಾ? ನೋಡಿದ್ರೆ ಬೆರಗಾಗ್ತೀರಾ ಬಿಡಿ!

ಈ ‘ಅರ್ಕ ಸಹನ’ ಹಣ್ಣಿನ ಸೈಜು ನೋಡಿದ್ರೆ, ಖಂಡಿತ ಎಂಥವರಿಗಾದ್ರೂ ಕಣ್ಣಕ್ಕೇತಾವೆ!ಯಾಕಂದ್ರೆ, ಒಂದೊಂದು ಹಣ್ಣು ಸುಮ್ನೆ 300 ಗ್ರಾಂನಿಂದ ಶುರುವಾಗಿ, ಬರೋಬ್ಬರಿ 800, 950 ಗ್ರಾಂ ವರೆಗೂ ತೂಗುತ್ತೆ ಕಣ್ರೀ.

ಇನ್ನು ಹೋದ 2023ರ ಸಾಲಿನಲ್ಲಿ ಬೆಳೆದ ಫಸಲಂತೂ ಬೊಂಬಾಟ್. ಆಗ ಬರೋಬ್ಬರಿ 1400 ಗ್ರಾಂ ತೂಕದ ಕಾಯಿ ಬಂದಿತ್ತಂತೆ!ಅಂದ್ರೆ ಹತ್ತಿರತ್ತಿರ ಒಂದೂವರೆ ಕೆಜಿ ತೂಕದ ಒಂದೇ ಒಂದು ಹಣ್ಣು! ಇದನ್ನ ಕೇಳಿದ್ರೆ ಯಾರಿಗಾದ್ರೂ ಎದೆ ಝಲ್ ಅನ್ಸಲ್ವಾ?

ಜವಾರಿ ಹಣ್ಣುಗಳ ತರಹ ಇದರೊಳಗೆ ಬರೀ ಬೀಜಾನೇ ತುಂಬಿರಲ್ಲ. ಬೀಜ ಕಮ್ಮಿ, ತಿನ್ನೋ ತಿರುಳು (Pulp) ಮಾತ್ರ ಭರ್ಜರಿಯಾಗಿರುತ್ತೆ. ಸುಮ್ನೆ ಚಮಚ ತಗೊಂಡು, ಐಸ್ ಕ್ರೀಮ್ ತಿಂದಂಗೆ ಆರಾಮಾಗಿ ಸವಿಯಬಹುದು. ಅಷ್ಟೊಂದು ಜೇನಿನಂಥ ಸಿಹಿ, ತಿಂದ ತಕ್ಷಣ ಮೈಗೆಲ್ಲಾ ಎನರ್ಜಿ ಕೊಡೋ ಹಣ್ಣು ಇದು.

ಇದನ್ನೂ ಓದಿ: ಪೋಸ್ಟ್ ಆಫೀಸ್ ಆರ್ ಡಿ RD ಯೋಜನೆ: ನಮ್ ಹಳ್ಳಿ ಜನರ ಬೆವರಿನ ದುಡ್ಡಿಗೆ ಭರ್ಜರಿ ಬಡ್ಡಿ ಕೊಡುವ ಗ್ಯಾರಂಟಿ ಸ್ಕೀಮ್! 

ಸಾವಯವ ಗೊಬ್ಬರ ಮತ್ತು ಕೃಷಿ ವಿಧಾನ

ರಾಸಾಯನಿಕಕ್ಕಿಂತ ಹೆಚ್ಚಾಗಿ ಶಿವಯೋಗಿ ಅವರು ಸಾವಯವ (Organic) ಕೃಷಿಯತ್ತ ಹೆಚ್ಚು ಒಲವು ತೋರಿದ್ದಾರೆ.

  • ತೋಟಕ್ಕೆ ಕುರಿಗೊಬ್ಬರವನ್ನು ಹೆಚ್ಚಾಗಿ ಬಳಸುತ್ತಾರೆ.

  • ಅಷ್ಟೇ ಅಲ್ಲದೆ, ಗಿಡದ ಟೊಂಗೆಗಳನ್ನು ಕತ್ತರಿಸಿದಾಗ, ಆ ಹಸಿರೆಲೆಗಳನ್ನು ಗುಜರಾತ್‌ನಿಂದ ತಂದಿರುವ ಯಂತ್ರದಲ್ಲಿ ಪುಡಿ ಮಾಡಿ, ಮತ್ತೆ ಗಿಡದ ಬುಡಕ್ಕೆ ಹಾಕಿ ಹಸಿರೆಲೆ ಗೊಬ್ಬರ ಮಾಡುತ್ತಾರೆ.

  • ಮೀನಿನ ಅಮೈನೋ ಆಮ್ಲ (Fish Amino Acid): 20 ಕೆಜಿ ಮೀನಿನ ತ್ಯಾಜ್ಯ ಮತ್ತು 20 ಕೆಜಿ ಸಾವಯವ ಬೆಲ್ಲವನ್ನು ಒಂದು ಬ್ಯಾರೆಲ್‌ನಲ್ಲಿ ನೆನೆಹಾಕಿ, ದ್ರವರೂಪದ ಪೋಷಕಾಂಶ ತಯಾರಿಸಿ ಗಿಡಗಳಿಗೆ ನೀಡುತ್ತಾರೆ. ಇದು ಬೆಳೆಯ ಬೆಳವಣಿಗೆಗೆ ಹೇಳಿ ಮಾಡಿಸಿದ ಮದ್ದು.

ಕೈಯಾರೆ ಮಾಡೋ ಪರಾಗ ಸ್ಪರ್ಶ: ಇದೆ ನೋಡ್ರಿ ಯಶಸ್ಸಿನ ಅಸಲಿ ಗುಟ್ಟು!

ಮಾಮೂಲಿ ಜವಾರಿ ಸೀತಾಫಲ ತನ್ನಷ್ಟಕ್ಕೆ ತಾನೇ ಕಾಯಾಗುತ್ತೆ, ಬಿಡಿ. ಆದ್ರೆ, ಈ ‘ಅರ್ಕ ಸಹನ’ ತಳಿಗೆ ಹಂಗಲ್ಲ. ಇದಕ್ಕೆ ನಾವೇ ಕೈಯಾರೆ ಪರಾಗ ಸ್ಪರ್ಶ ಮಾಡ್ಲೇಬೇಕು. ಇದೇ ನೋಡ್ರಿ ಈ ಕೃಷೀಲಿ ತುಂಬಾನೇ ಮುಖ್ಯವಾದ ಘಟ್ಟ!

ಇದಕ್ಕಾಗಿಯೇ ಅವರು ಒಂದು ಭರ್ಜರಿ ಐಡಿಯಾ ಮಾಡಿದ್ದಾರೆ. ತಮ್ಮ ತೋಟದಲ್ಲೇ 50 ‘ಬಾಲಾನಗರ’ (Balanagar) ತಳಿಯ ಗಿಡಗಳನ್ನ ಬೆಳೆಸಿದ್ದಾರೆ.

  • ಬೆಳಗಿನ ಜಾವ ಎದ್ದು ಆ ಬಾಲಾನಗರ ಹೂವುಗಳನ್ನ ಕಿತ್ತು ತರ್ತಾರೆ.

  • ಅದನ್ನ ಜರಡಿಯಲ್ಲಿ ಸೋಸಿ, ಅದರ ಪುಡಿಯನ್ನ (ಪರಾಗ) ನೀಟಾಗಿ ಕಲೆಕ್ಟ್ ಮಾಡ್ತಾರೆ.

  • ಆಮೇಲೆ ಮಧ್ಯಾಹ್ನದ ಹೊತ್ತಿಗೆ, ಈ ಅರ್ಕ ಸಹನ ಹೂವುಗಳಿಗೆ ಕೈಯಾರೆ ಆ ಪುಡಿಯನ್ನ ಅಂಟಿಸ್ತಾರೆ.

ಗುರುತು ಹಿಡಿಯೋದು ಹೆಂಗೆ? ಯಾವ ಹೂವಿಗೆ ಪುಡಿ ಹಚ್ಚಿದೀವಿ ಅಂತ ಗೊತ್ತಾಗಬೇಕಲ್ಲ? ಅದಕ್ಕೆ, ಆ ಹೂವಿನ ಪಕ್ಕದ ಎಲೆಯನ್ನ ಸ್ವಲ್ಪ ಮಡಚಿ (ಮುರಿದು) ಗುರುತು ಇಡ್ತಾರೆ.

ಹೀಗೆ ಮಾಡಿದ್ರೆ ಸಾಕು, ಕೇವಲ 2-3 ದಿನಗಳಲ್ಲಿಯೇ ಜೋಳದ ಕಾಳಿನ ಸೈಜಿಗೆ ಕಾಯಿ ಕಚ್ಚಿಕೊಳ್ಳುತ್ತೆ! ಒಂದು ಗಿಡಕ್ಕೆ ಕನಿಷ್ಠ 60 ಕಾಯಿ ನಿಲ್ಲುವಂತೆ ನೋಡ್ಕೊಳ್ತಾರೆ, ಅದಕ್ಕೇ ಹಣ್ಣು ಅಷ್ಟು ದಪ್ಪ ಬರೋದು.

ಕೀಟಬಾಧೆ ನಿಯಂತ್ರಣ ಮತ್ತು ಹಣ್ಣಿನ ರಕ್ಷಣೆ

ಸೀತಾಫಲಕ್ಕೆ ಪ್ರಮುಖ ಶತ್ರು ಎಂದರೆ ಹೂಜಿ ಹುಳ. ಈ ಹುಳಗಳು ಕಾಯಿಯ ಮೇಲೆ ಕುಳಿತು ಮೊಟ್ಟೆ ಇಟ್ಟರೆ, ಹಣ್ಣು ಮಾಗುವ ಹೊತ್ತಿಗೆ ಒಳಗೆಲ್ಲಾ ಕೀಡೆ (ಹುಳಗಳು) ಆಗಿ ಬಿಡುತ್ತವೆ.

ಇದನ್ನು ತಡೆಯಲು ಶಿವಯೋಗಿ ಅವರು ಕಂಡುಕೊಂಡ ಅದ್ಭುತ ಐಡಿಯಾಗಳು ಇಲ್ಲಿವೆ:

  • ಪೇಪರ್ ಬ್ಯಾಗ್ ಕವರಿಂಗ್: ಪ್ರತಿಯೊಂದು ಕಾಯಿಗೂ ವಿಶೇಷವಾದ ಕವರ್ (ಪೇಪರ್ ಬ್ಯಾಗ್) ಹಾಕುತ್ತಾರೆ. ಒಂದು ಬ್ಯಾಗ್‌ಗೆ ಕೇವಲ 70-80 ಪೈಸೆ ಬೀಳುತ್ತದೆ. ಈ ವರ್ಷ ಬರೋಬ್ಬರಿ 25,000 ಕವರ್ ತರಿಸಿದ್ದಾರೆ.

  • ಮೋಹಕ ಬಲೆ (Pheromone Traps): ತೋಟದಲ್ಲಿ 30 ಮೋಹಕ ಬಲೆಗಳನ್ನು ಅಳವಡಿಸಿದ್ದಾರೆ. ಇದರಲ್ಲಿ ಹಾಕುವ ಬಿಸ್ಕೆಟ್‌ಗೆ 30 ರೂಪಾಯಿ ಬೆಲೆ, ಇದು 30 ದಿನಗಳ ಕಾಲ ಕೆಲಸ ಮಾಡುತ್ತದೆ. ಇದರ ವಾಸನೆಗೆ ಬಂದು ಹುಳಗಳು ಬೀಳುತ್ತವೆ.

  • ಸೋಲಾರ್ ಟ್ರ್ಯಾಪ್ (Solar Trap): ರಾತ್ರಿ ಹೊತ್ತು ಬರುವ ಹಾನಿಕಾರಕ ಕೀಟಗಳು ಈ ಸೋಲಾರ್ ಲೈಟ್ ಬಲೆಗೆ ಬಿದ್ದು ಸಾಯುತ್ತವೆ.

  • ಗಿಡದ ಬುಡಕ್ಕೆ ಬೋರ್ಡೋ ಪೇಸ್ಟ್ (ಸುಣ್ಣ ಮತ್ತು ತುತ್ತಿನ ಮಿಶ್ರಣ) ಹಚ್ಚುತ್ತಾರೆ. ಇದರಿಂದ ಕಾಂಡ ಕೊರೆಯುವ ಹುಳ ಬರುವುದಿಲ್ಲ.

ಈ ಎಲ್ಲಾ ಐಡಿಯಾಗಳಿಂದಾಗಿ ಲಕ್ಷಾಂತರ ರೂಪಾಯಿ ಕೀಟನಾಶಕದ ಖರ್ಚು ಉಳಿಯುತ್ತದೆ.

ಇದನ್ನೂ ಓದಿ: IDBI ಬ್ಯಾಂಕ್‌ನಲ್ಲಿ 1100 ಬಂಪರ್ ಹುದ್ದೆಗಳು! ಯಾವುದೇ ಡಿಗ್ರಿ ಆದ್ರೂ ಅರ್ಜಿ ಹಾಕ್ರಿ, ತಿಂಗಳಿಗೆ 53 ಸಾವಿರ ಪಗಾರ!

ಕಡಿಮೆ ನೀರು, ಕಡಿಮೆ ಕೆಲಸ!

ಸೀತಾಫಲ ಕೃಷಿಗೆ ನೀರು ಅಷ್ಟೊಂದು ಬೇಕಾಗಿಯೇ ಇಲ್ಲ. 6 ಅಡಿಗೆ ಒಂದರಂತೆ 20mm ಲ್ಯಾಟರಲ್ ಪೈಪ್ ಮೂಲಕ ಹನಿ ನೀರಾವರಿ (Drip irrigation) ಮಾಡಿದ್ದಾರೆ. ವೆಂಚುರಿ (Venturi) ಸಿಸ್ಟಮ್ ಮೂಲಕ ಗಿಡದ ಬುಡಕ್ಕೆ ಬೇಕಾದ ದ್ರವ ರೂಪದ ಗೊಬ್ಬರವನ್ನು ಸುಲಭವಾಗಿ ಬಿಡುತ್ತಾರೆ.

ವರ್ಷದಲ್ಲಿ ಆರು ತಿಂಗಳ ಕಾಲ ಬೆಳೆ ತೆಗೆದ ಮೇಲೆ, ಮುಂದಿನ ಆರು ತಿಂಗಳು ಗಿಡಗಳಿಗೆ ಸಂಪೂರ್ಣ ರೆಸ್ಟ್ ನೀಡಲಾಗುತ್ತದೆ. ತಿಂಗಳಿಗೆ ಒಮ್ಮೆ ಸ್ವಲ್ಪ ನೀರು ಕೊಟ್ಟರೆ ಸಾಕು ಗಿಡ ಬದುಕಿಕೊಳ್ಳುತ್ತದೆ.

ಮಣ್ಣು ಎಷ್ಟೇ ಒಣಗಿದ್ದರೂ, ಕಲ್ಲು-ಮುಳ್ಳಿನ ಗರಸು ಜಾಗವಾಗಿದ್ದರೂ ಸರಿ, ಈ ಬೆಳೆ ಹುಲುಸಾಗಿ ಬೆಳೆದು ನಿಲ್ಲುತ್ತದೆ. ಕೇವಲ ವರ್ಷಕ್ಕೊಮ್ಮೆ ಜೂನ್-ಜುಲೈ ತಿಂಗಳಲ್ಲಿ ಸರಿಯಾಗಿ ಟೊಂಗೆಗಳ ಕಟಿಂಗ್ (Pruning) ಮಾಡಿದರೆ ಸಾಕು, ಹೂವು ಬಿಡಲು ಶುರುವಾಗುತ್ತದೆ.

ಮಾರ್ಕೆಟಿಂಗ್ ಟೆನ್ಷನ್ ಬಿಡಿ: ಬಸ್ಸಿಗೆ ಹಾಕಿದ್ರೆ ಸಾಕು, ಅಕೌಂಟ್‌ಗೆ ದುಡ್ಡು ಜಮಾ!

ಈ ‘ಅರ್ಕ ಸಹನ’ ಹಣ್ಣಿನ ದೊಡ್ಡ ಪ್ಲಸ್ ಪಾಯಿಂಟ್ ಅಂದ್ರೆ, ಇದು ಬೇಗ ಕೆಡೋದೇ ಇಲ್ಲ ನೋಡ್ರಿ.ಗಿಡದಿಂದ ಹಣ್ಣು ಕೀಳ್ದಾಗಲಿಂದ ಲೆಕ್ಕ ಹಾಕಿದ್ರು, ಬರೋಬ್ಬರಿ 15 ರಿಂದ 20 ದಿನ ಆದ್ರೂ ಹಣ್ಣು ಹಾಳಾಗಲ್ಲ ಕಣ್ರೀ.

ಹೊರಗಡೆ ಗಾಳಿಗೆ ಸಿಪ್ಪೆ ಸ್ವಲ್ಪ ಕಪ್ಪಾಗಬಹುದು ಬಿಡಿ. ಆದ್ರೆ ಒಳಗಿನ ಸಿಹಿ ತಿರುಳು ಮಾತ್ರ ಹಾಗೇ ಗಟ್ಟಿಯಾಗಿ, ಜೇನಿನಂತೆ ಇರುತ್ತೆ.ಹೀಗಾಗಿ ಇದರ ಮಾರ್ಕೆಟಿಂಗ್ ಮಾಡೋದು ತುಂಬಾನೇ ಸುಲಭ:

  • ಇದರ ಆಯಸ್ಸು (Shelf Life) ಜಾಸ್ತಿ ಇರೋದ್ರಿಂದ, ಪಕ್ಕದ ರಾಜ್ಯಗಳಿಗೆ ಅಷ್ಟೇ ಅಲ್ಲ, ಬೇರೆ ದೇಶಗಳಿಗೂ ಆರಾಮಾಗಿ ಎಕ್ಸ್‌ಪೋರ್ಟ್ (Export) ಮಾಡಬಹುದು.

  • ನಮ್ಮ ಶಿವಯೋಗಿ ಅಣ್ಣ, ಈ ಹಣ್ಣಿಗೆ ವೈಟ್ ಪೇಪರ್ ಸುತ್ತಿ ಒಂಚೂರು ಡ್ಯಾಮೇಜ್ ಆಗದಂಗೆ ನೀಟಾಗಿ ಬಾಕ್ಸ್‌ನಲ್ಲಿ ಪ್ಯಾಕ್ ಮಾಡ್ತಾರೆ.

  • ಊರ ಬಸ್ಸಿಗೆ ಹಾಕಿ ಕಳಿಸ್ತಾರೆ, ಬೆಂಗಳೂರಿನ ಮಾರ್ಕೆಟ್‌ನಲ್ಲಿ ಇದು ಕೈಗೈಗೆ ಬಿಕರಿಯಾಗುತ್ತೆ.

ಮಧ್ಯವರ್ತಿಗಳ (ದಲಾಲಿಗಳ) ಕಾಟ ಇಲ್ಲವೇ ಇಲ್ಲ. ಮಾರ್ಕೆಟ್‌ಗೆ ಅಲೆಯೋ ಟೆನ್ಷನ್ ಇಲ್ದೆ, ಬ್ಯಾಂಕ್ ಅಕೌಂಟ್‌ಗೆ ನೇರವಾಗಿ ಲಕ್ಷ ಲಕ್ಷ ಹಣ ಜಮಾ ಆಗಿಬಿಡುತ್ತೆ!

ನೀವು ಕೂಡ ಸೀತಾಫಲ ಕೃಷಿ ಮಾಡುವ ಆಸಕ್ತಿ ಇದ್ದರೆ ಸಂಪರ್ಕಿಸಿ- 9900222987

ಮಣ್ಣಲ್ಲಿ ಬೆವರು ಸುರಿಸಿದ್ರೆ ಒಲಿಯುತ್ತಾಳೆ ಲಕ್ಷ್ಮಿ!

ನೋಡಿದ್ರಲ್ಲ ರೈತ ಮಿತ್ರರೇ! ವ್ಯವಸಾಯ ಅಂದ್ರೆ ಬರೀ ಕಷ್ಟದ ಕೆಲಸ ಅಂತ ಸುಮ್ನೆ ಕೂರಬೇಡಿ. ಸ್ವಲ್ಪ ಶ್ರಮದ ಜೊತೆಗೆ, ನಮ್ಮ ವ್ಯವಸಾಯದಲ್ಲಿ ಒಂದಿಷ್ಟು ಬುದ್ಧಿವಂತಿಕೆ ಇದ್ರೆ ಸಾಕು. ಹೊಸ ತಂತ್ರಜ್ಞಾನ ಬಳಸಿ, ನಮ್ಮೂರ ಮಣ್ಣಲ್ಲೇ ಲಕ್ಷ ಲಕ್ಷ ಎಣಿಸಬಹುದು ಕಣ್ರೀ.

  • ಮಳೆ ಇಲ್ಲ, ನೀರಿಲ್ಲ ಅಂತ ಚಿಂತೆ ಮಾಡೋದು ಬಿಡಿ.

  • ನಿಮ್ಮ ಜಮೀನಿನಲ್ಲಿ ಕಲ್ಲು, ಗರಸು ಮಣ್ಣು ಇದ್ರೂ ತಲೆ ಕೆಡಿಸ್ಕೊಬೇಡಿ.

ಅಂತ ಜಾಗಕ್ಕೂ ಈ ‘ಅರ್ಕ ಸಹನ’ ಸೀತಾಫಲ ಹೇಳಿ ಮಾಡಿಸಿದ ಬೆಳೆ. ಇದು ನಮ್ಮ ರೈತರಿಗೆ ಸಿಕ್ಕಿರೋ ವರದಾನ ಅಂದ್ರೂ ಖಂಡಿತ ತಪ್ಪಾಗಲ್ಲ.ನಮ್ಮ ಶಿವಯೋಗಿ ಅಣ್ಣನ ಈ ಭರ್ಜರಿ ಕೃಷಿ ಸಾಧನೆ, ಇವತ್ತಿನ ಪ್ರತಿಯೊಬ್ಬ ಯುವ ರೈತರಿಗೂ ಒಂದು ದೊಡ್ಡ ಸ್ಫೂರ್ತಿ.

ನೀವು ಕೂಡ ನಿಮ್ಮ ಜಮೀನಲ್ಲಿ ಸ್ವಲ್ಪ ಜಾಗ ಮೀಸಲಿಟ್ಟು, ಈ ಕೃಷಿ ಟ್ರೈ ಮಾಡಿ ನೋಡಿ. ಯಶಸ್ಸು ಅನ್ನೋದು ನಿಮ್ಮ ಕಾಲು ಬುಡಕ್ಕೆ ಬರೋದು ನೂರಕ್ಕೆ ನೂರು ಗ್ಯಾರಂಟಿ.

ಮತ್ತಷ್ಟು ಕೃಷಿ ಮಾಹಿತಿಗೆ ನಮ್ಮ ‘ಮಾಹಿತಿ ಸಂಚಾರಿ’ ಓದುತ್ತಿರಿ! ಹಳ್ಳಿ ಕಡೆಯ ಕೃಷಿ, ಲಾಭ ತರೋ ವ್ಯವಸಾಯದ ಹೊಸ ಐಡಿಯಾಗಳಿಗೆ, ಹಾಗೂ ಉಪಯುಕ್ತ ಮಾಹಿತಿಗಾಗಿ ನಮ್ಮ ಬ್ಲಾಗ್ ಓದುತ್ತಾ ಇರಿ.

ಈ ಲೇಖನ ನಿಮಗೆ ಇಷ್ಟ ಆಗಿದ್ರೆ, ಕೆಳಗೆ ಕಮೆಂಟ್ ಮಾಡಿ ನಮ್ಗೆ ತಿಳಿಸಿ. ಹಾಗೆ ಮರೀದೇ, ಈ ಉಪಯುಕ್ತ ಮಾಹಿತಿಯನ್ನ ನಿಮ್ಮ ರೈತ ಗೆಳೆಯರ ವಾಟ್ಸಾಪ್ ಗ್ರೂಪ್‌ಗಳಿಗೂ ಶೇರ್ ಮಾಡಿ

Leave a Comment