Telegram Join My Telegram WhatsApp Join My WhatsApp

ಯೂರಿಯಾ ಡಿಎಪಿ ಬೇಡವೇ ಬೇಡ! ಬರಿ ಶಗಣಿ ಯಿಂದಲೇ ಹೊಲಕ್ಕೆ ಜೀವ ತುಂಬಿದ ಧಾರವಾಡದ ರೈತನ ಕರಾಮತ್ತು!

ಯೂರಿಯಾ, ಡಿಎಪಿ ಬೇಡವೇ ಬೇಡ! ಬರಿ ‘ಶಗಣಿ’ಯಿಂದಲೇ ಹೊಲಕ್ಕೆ ಜೀವ ತುಂಬಿದ ಧಾರವಾಡದ ರೈತನ ಕರಾಮತ್ತು!

ನಮಸ್ಕಾರ ರೈತಬಾಂಧವರೇ, ಹಾಗೂ ‘ಮಾಹಿತಿ ಸಂಚಾರಿ’ ಓದುಗರಿಗೆ ಪ್ರೀತಿಯ ಸ್ವಾಗತ. ಇವತ್ತಿನ ದಿನಗಳಲ್ಲಿ ಒಕ್ಕಲುತನ ಅಂದರೆ ಬರೀ ರಸಗೊಬ್ಬರ, ಕ್ರಿಮಿನಾಶಕಗಳದೇ ಕಾರುಬಾರು ಆಗಿಬಿಟ್ಟಿದೆ. ಎಷ್ಟೇ ರಸಗೊಬ್ಬರ ಸುರಿದರೂ ಹೊಲದಲ್ಲಿ ಬೆಳೆ ಬರ್ತಿಲ್ಲ, ಭೂಮಿ ತಾಯಿ ಒಣಗಿ ಸತ್ವ ಕಳೆದುಕೊಳ್ತಾ ಇದ್ದಾಳೆ ಅನ್ನೋ ಚಿಂತೆ ನಮ್ಮ ಬಹಳಷ್ಟು ರೈತರಿಗಿದೆ.

ಆದರೆ, ನಮ್ಮ ಹಿರಿಯರು ಅನಾದಿ ಕಾಲದಲ್ಲಿ ಯಾವುದೇ ಯೂರಿಯಾ, ಡಿಎಪಿ ಇಲ್ಲದೆ ಬಂಡಿಯಷ್ಟು ದವಸ ಧಾನ್ಯ ಬೆಳೀತಾ ಇದ್ರಲ್ಲ, ಅದು ಹೇಗೆ? ಅವರ ಗುಟ್ಟೇನು? ಇದನ್ನೇ ಹುಡುಕಿಕೊಂಡು ಹೋದ ಧಾರವಾಡದ ಒಬ್ಬ ರೈತ, ಇವತ್ತು ಇಡೀ ಜಗತ್ತೇ ತಿರುಗಿ ನೋಡುವಂತಹ ಕೃಷಿ ಕ್ರಾಂತಿ ಮಾಡಿದ್ದಾರೆ.

ಬನ್ನಿ, ಇವತ್ತಿನ ನಮ್ಮ ಈ ಲೇಖನದಲ್ಲಿ ಆ ಮಣ್ಣಿನ ಮಗನ ಅದ್ಭುತ ಸಾಧನೆ ಹಾಗೂ ಅವರು ಹೇಳಿಕೊಡುವ ‘ಶಗಣಿ ಗೊಬ್ಬರ’ದ ಅಸಲಿ ತಾಕತ್ತಿನ ಬಗ್ಗೆ ಸರಳವಾಗಿ, ನಮ್ಮದೇ ಹಳ್ಳಿಯ ಭಾಷೆಯಲ್ಲಿ ತಿಳಿದುಕೊಳ್ಳೋಣ.

ಯಾರು ಈ ಬಿಸಿ ರೊಟ್ಟಿ ಮಲ್ಲೇಶಪ್ಪ?

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ‘ಹಿರೆಗುಂಜಾಳ’ ಅನ್ನೋ ಪುಟ್ಟ ಗ್ರಾಮದ ರೈತ ಈ ನಮ್ಮ ಮಲ್ಲೇಶಪ್ಪ. ಇವರನ್ನ ಊರಿನಲ್ಲಿ ‘ಬಿಸಿ ರೊಟ್ಟಿ ಮಲ್ಲೇಶಪ್ಪ’ ಅಂತಾನೇ ಪ್ರೀತಿಯಿಂದ ಕರೆಯುತ್ತಾರೆ.

ಕಳೆದ 20 ವರ್ಷಗಳಿಂದ ಇವರು ತಮ್ಮ ಜಮೀನಿಗೆ ಒಂದು ಕಾಳು ಯೂರಿಯಾ ಆಗಲಿ, ಡಿಎಪಿ ಆಗಲಿ ಹಾಕಿಲ್ಲ! ಒಂದು ಹನಿ ರಾಸಾಯನಿಕ ಸಿಂಪಡಿಸಿಲ್ಲ.

ಆದರೂ ಇವರ 20 ಎಕರೆ ತೋಟ ನೋಡಲು ದೇಶ-ವಿದೇಶಗಳಿಂದ ಕೃಷಿ ವಿಜ್ಞಾನಿಗಳು, ತಜ್ಞರು ಸಾಲುಗಟ್ಟಿ ಬರುತ್ತಾರೆ. ಇವರು ತಮ್ಮ ಹೊಲವನ್ನು ಕೇವಲ ಹಸುವಿನ ಶಗಣಿ, ಗೋಮೂತ್ರ ಮತ್ತು ಮಣ್ಣಿನಿಂದಲೇ ನಂದನವನ ಮಾಡಿದ್ದಾರೆ.

ಇದನ್ನೂ ಓದಿ: ಬರೀ 50 ಸಾವಿರದಲ್ಲಿ ಲೈಫ್‌ಟೈಮ್ ಫ್ರೀ ಗ್ಯಾಸ್! ಲಕ್ಷ ಲಕ್ಷ ಆದಾಯ ತರುವ ‘ಸರಣಿ ಗೋಬರ್ ಗ್ಯಾಸ್’ ಮತ್ತು ರೈತನ ಜುಗಾಡ್ ನೀರಾವರಿ!

ಕೆಲಸ ಬಿಟ್ಟು ಕೃಷಿಯತ್ತ ಒಲವು

ಸುಮಾರು 20 ವರ್ಷಗಳ ಹಿಂದೆ ಪ್ರಜಾವಾಣಿ ಪೇಪರ್ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮಲ್ಲೇಶಪ್ಪನವರು, ತಾಯಿಯ ಮಾತಿಗೆ ಬೆಲೆಕೊಟ್ಟು ಕೆಲಸ ಬಿಟ್ಟು ತಮ್ಮ ಊರಿಗೆ ಬಂದು ಕೃಷಿಗೆ ಇಳಿದರು.

ಆರಂಭದಲ್ಲಿ ಕೃಷಿ ಇಲಾಖೆಯವರ ಸಲಹೆಯಂತೆ ಎರೆಹುಳು ಗೊಬ್ಬರ (Vermicompost) ಮಾಡಲು ಶುರು ಮಾಡಿದರು. ಆದರೆ ಅವರ 20 ಎಕರೆ ಜಮೀನಿನಲ್ಲಿ ಕುಡಿಯಲೂ ನೀರಿರಲಿಲ್ಲ. ಎರೆಹುಳು ತೊಟ್ಟಿಗೆ ನೀರು ಎಲ್ಲಿಂದ ತರುವುದು? ಆ ಪ್ರಯತ್ನ ಅಲ್ಲಿಗೇ ನಿಂತಿತು.

ನಂತರ ಸುಭಾಷ್ ಪಾಳೇಕರ್ ಅವರ ಪುಸ್ತಕ ಓದಿ ‘ಜೀವಾಮೃತ’ ಮಾಡಲು ಮುಂದಾದರು. ಅದಕ್ಕೂ 200 ಲೀಟರ್ ನೀರು ಬೇಕಿತ್ತು. ಅದೂ ಕೂಡ ನೀರಿಲ್ಲದ ಕಾರಣ ಸಾಧ್ಯವಾಗಲಿಲ್ಲ.

ಅಜ್ಜನ ನೆನಪು ಮತ್ತು ಶಗಣಿಯ ಪ್ರಯೋಗ

ಆಗ ಮಲ್ಲೇಶಪ್ಪನವರಿಗೆ ತಮ್ಮ ಅಜ್ಜ ಚನ್ನಬಸಪ್ಪನ ನೆನಪಾಯಿತು. ಅವರ ಅಜ್ಜ 45 ದನಗಳನ್ನು ಸಾಕಿದ್ದರು. ಹೊಲಕ್ಕೆ ಹೋಗುವಾಗ ದಾರಿಯಲ್ಲಿ ಎಲ್ಲೇ ಶಗಣಿ ಬಿದ್ದರೂ ಎತ್ತಿಕೊಂಡು ಬಂದು ತಿಪ್ಪೆಗೆ ಹಾಕುತ್ತಿದ್ದರು.

“ಯಾವುದೇ ಕೆಮಿಕಲ್ ಇಲ್ಲದೆ ನಮ್ಮ ಅಜ್ಜ ಎತ್ತಿನ ಗಾಡಿಗಟ್ಟಲೆ ಬೆಳೆ ತೆಗೆಯುತ್ತಿದ್ದನಲ್ಲ, ಆ ಶಗಣಿಯಲ್ಲಿ ಅಂಥದ್ದೇನಿದೆ?” ಎಂದು ಮಲ್ಲೇಶಪ್ಪನವರ ತಲೆಯಲ್ಲಿ ಹುಳ ಬಿಟ್ಟಿತು.

ಕೂಡಲೇ ಸುಮಾರು 30-35 ಕೆ.ಜಿ ಶಗಣಿ, 3 ಕೆ.ಜಿ ಮಣ್ಣು, ಸ್ವಲ್ಪ ಗೋಮೂತ್ರ, ಹಿಟ್ಟು ಮತ್ತು ಬೆಲ್ಲ ಹಾಕಿ ಕಲಸಿ ಒಂದು ಗುಡ್ಡೆ ಮಾಡಿದರು. 15 ದಿನ ಬಿಟ್ಟು ನೋಡಿದರೆ ಕೊಳೆತ ವಾಸನೆ ಬರುತ್ತಿತ್ತು. ಆದರೂ ಛಲ ಬಿಡದೆ ದಿನಾಲೂ ಅದಕ್ಕೆ ಒಂದು ಕೋಲು ಚುಚ್ಚಿ ಗಾಳಿ ಆಡುವಂತೆ ಮಾಡಿದರು.

ಸುಮಾರು 8-10 ತಿಂಗಳ ನಂತರ ಆ ಗುಡ್ಡೆಯನ್ನು ಬಿಡಿಸಿ ನೋಡಿದರೆ, ಅದರಲ್ಲಿ ಕೊಳೆತ ವಾಸನೆ ಹೋಗಿ, ಮುಂಗಾರು ಮಳೆಯ ಮೊದಲ ಹನಿಯ ಮಣ್ಣಿನ ಪರಿಮಳ (ವಾಸನೆ) ಬರುತ್ತಿತ್ತು! ಇದು ಅವರ ಮೊದಲ ಗೆಲುವು.

ಇದನ್ನೂ ಓದಿ: ಹಳ್ಳಿ ಮಂದಿಗೆ ಎಚ್ಚರಿಕೆ: ಬಾಯಿಗೆ ರುಚಿ, ಬದುಕಿಗೆ ಉರಿ! ಗುಟ್ಕಾಅನ್ನೋ ಹೆಮ್ಮಾರಿಯ ಅಸಲಿ ಕಥೆ

ಗೊಣ್ಣೆ ಹುಳದ (Larvae) ಪ್ರವೇಶ ಮತ್ತು ವಿಜ್ಞಾನಿಗಳ ಅಚ್ಚರಿ

ಈ ಶಗಣಿ ಗುಡ್ಡೆಯನ್ನು ಗಿಡದ ಬುಡಕ್ಕೆ ಹಾಕಲು ಶುರು ಮಾಡಿದಾಗ, ಅಲ್ಲಿಗೆ ‘ಲಾರ್ವ’ ಅಂದರೆ ಗೊಣ್ಣೆ ಹುಳಗಳು (Rhino beetle larvae) ಬಂದು ಸೇರಿಕೊಂಡವು. ಇವು ನನ್ನ ಬೆಳೆಯನ್ನು ಹಾಳು ಮಾಡುತ್ತವೆ ಎಂದು ಹೆದರಿದ ಮಲ್ಲೇಶಪ್ಪ, ಸಾವಿರಾರು ಹುಳಗಳನ್ನು ಸಾಯಿಸಿದರು.

ಆದರೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ಆರ್.ಕೆ. ಪಾಟೀಲ್ ಅವರು, “ಅದನ್ನು ಸಾಯಿಸಬೇಡ, ಆ ಹುಳಗಳು ಶಗಣಿಯನ್ನು ತಿಂದು ಅತ್ಯುತ್ತಮವಾದ ಕಾಂಪೋಸ್ಟ್ ಮಾಡುತ್ತವೆ” ಎಂದು ಬುದ್ಧಿವಾದ ಹೇಳಿದರು.

ಆ ಹುಳಗಳು ಶಗಣಿಯನ್ನು ತಿಂದು ಹಾಕಿದ ಹಿಕ್ಕೆ, ಮಲ್ಲಿಗೆ ಹೂವಿನಂತೆ ಮೃದುವಾಗಿತ್ತು. ಎಸಿಯಂತೆ ತಂಪಾಗಿತ್ತು!

ಕೃಷಿ ವಿಜ್ಞಾನಿಗಳೇ ಬೆರಗಾದ ರಿಪೋರ್ಟ್: ಈ ಶಗಣಿ ಗೊಬ್ಬರದ ಅಸಲಿ ತಾಕತ್ತು!

ಇದೇನು ನಾವು ಸುಮ್ಮನೆ ಬಾಯಲ್ಲಿ ಹೊಡೆಯೋ ಕೊಚ್ಚೆ ಮಾತಲ್ಲ ಬಿಡಿ!ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಾದ ಡಾ. ಸಿ.ಪಿ. ಚಂದ್ರಶೇಖರ್ ಸಾಹೇಬರು,

ಈ ಮಣ್ಣನ್ನು ಖುದ್ದಾಗಿ ಲ್ಯಾಬ್‌ನಲ್ಲಿ ಪರೀಕ್ಷೆ (Lab Test) ಮಾಡಿದ್ದಾರೆ. ಆ ಮಣ್ಣಿನ ರಿಪೋರ್ಟ್ ನೋಡಿ ಸ್ವತಃ ಕೃಷಿ ಪಂಡಿತರೇ ದಂಗಾಗಿ ಹೋಗಿದ್ದಾರೆ!ಅದರ ಅಸಲಿ ತಾಕತ್ತು ಎಷ್ಟಿದೆ ಅನ್ನೋದನ್ನ ನೀವೇ ಒಮ್ಮೆ ಕಣ್ಣಾರೆ ನೋಡಿ:

  • 152% ನೀರು ಹಿಡಿಯೋ ಶಕ್ತಿ: ನೀವು ನಂಬ್ತೀರೋ ಬಿಡ್ತೀರೋ, 1 ಕೆ.ಜಿ. ಈ ಶಗಣಿ ಗೊಬ್ಬರ ಮಣ್ಣಿಗೆ ಸೇರಿದ್ರೆ, ಅದು ಒಂದೂವರೆ ಕೆ.ಜಿ. (1.5 kg) ಯಷ್ಟು ನೀರನ್ನು ತನ್ನಲ್ಲೇ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತೆ! ಅಂದ್ರೆ, ಮಳೆಗಾಲದಲ್ಲಿ ನೀರನ್ನೆಲ್ಲಾ ಹೊಟ್ಟೇಲಿ ಇಟ್ಕೊಂಡು, ಬೇಸಿಗೆಯ ಕಡು ಬಿಸಿಲಲ್ಲಿ ನಮ್ಮ ಗಿಡಗಳಿಗೆ ತಂಪಾಗಿ ಉಣಬಡಿಸುತ್ತೆ. ಹೊಲಕ್ಕೊಂದು ವಾಟರ್ ಟ್ಯಾಂಕ್ ಕಟ್ಟಿಸಿದಂತೆಯೇ ಲೆಕ್ಕ!

  •  ಕೋಟಿ ಕೋಟಿ ಜೀವಾಣುಗಳ ಸೇನೆ: ನಾವು ಹೊಲಕ್ಕೆ ಬಿಡೋ ಸಾಮಾನ್ಯ ಜೀವಾಮೃತದಲ್ಲಿ 45 ಲಕ್ಷ ಬ್ಯಾಕ್ಟೀರಿಯಾ ಇದ್ರೆ, ಈ ದೇಸಿ ಗೊಬ್ಬರದಲ್ಲಿ ಬರೋಬ್ಬರಿ 3 ಕೋಟಿಗೂ ಹೆಚ್ಚು ಉಪಯುಕ್ತ ಜೀವಾಣುಗಳು (Microbes) ಇರ್ತವೆ! ಇವೇ ನಮ್ಮ ಭೂಮಿತಾಯಿಗೆ ಉಸಿರು ತುಂಬುವ ಅಸಲಿ ಜೀವಗಳು.

  • 16 ಬಗೆಯ ಪೋಷಕಾಂಶಗಳ ಖಜಾನೆ: ಯಾವುದೇ ಬೆಳೆ ನಳನಳಿಸುತ್ತಾ ಬೆಳೆಯೋಕೆ ಬೇಕಾದ 16 ಬಗೆಯ ಲಘು ಪೋಷಕಾಂಶಗಳು (Micronutrients), ಆಕ್ಟಿನೋಮೈಸಿಸ್ ಮತ್ತು ನೈಟ್ರೋಜನ್ ಫಿಕ್ಸರ್ ಎಲ್ಲವೂ ಹೊರಗಡೆ ಕಾಸು ಕೊಟ್ಟು ತರೋ ಬದಲು ಈ ಒಂದೇ ದೇಸಿ ಗೊಬ್ಬರದಲ್ಲಿ ಭರಪೂರವಾಗಿ ಸಿಗುತ್ತೆ.

ನಯಾಪೈಸೆ ಖರ್ಚಿಲ್ಲದೆ ಈ ಅದ್ಭುತ ದೇಸಿ ಗೊಬ್ಬರ ತಯಾರಿಸೋ ಸುಲಭ ದಾರಿ

ರೈತ ಅಣ್ಣತಮ್ಮಂದಿರೇ, ಅಂಗಡಿಗೆ ಹೋಗಿ ಸಾವಿರ ಸಾವಿರ ಕಾಸು ಸುರಿದು ಗೊಬ್ಬರ ತರೋ ಗೋಳು ಇನ್ಮುಂದೆ ಬೇಡ.ಇದೇ ತರಹದ ಬಂಗಾರದಂಥ ಗೊಬ್ಬರವನ್ನ ನೀವು ನಿಮ್ಮ ಹೊಲದಲ್ಲೇ, ನಿಮ್ಮ ಕೈಯಾರೆ ಮಾಡ್ಕೊಬಹುದು.ಇದನ್ನ ಮಾಡೋದು ಹೆಂಗೆ ಅಂತೀರಾ? ಇಲ್ಲಿದೆ ನೋಡಿ ಸರಳ ವಿಧಾನ:

  • ಶಗಣಿಯ ಗುಡ್ಡೆ: ಮೊದಲು ಒಂದು 30 ಕೆ.ಜಿ ಯಷ್ಟು ದನದ ಶಗಣಿಯನ್ನು ಎತ್ತಿ ಒಂದು ಕಡೆ ಗುಡ್ಡೆ ಹಾಕಿಕೊಳ್ಳಿ.

  • ಮಣ್ಣಿನ ಮಿಶ್ರಣ: ಆ ಶಗಣಿಗೆ ಬರೀ 2 ರಿಂದ 3 ಕೆ.ಜಿ ಯಷ್ಟು ನಿಮ್ಮ ಹೊಲದ ಬದುವಿನ ಮಣ್ಣನ್ನೇ ಸೇರಿಸಿ. (ನೀವು ಕೆಂಪು ಮಣ್ಣು ಹಾಕಿದ್ರೆ ಗೊಬ್ಬರ ಕೆಂಪಗಾಗುತ್ತೆ, ಎರೆಮಣ್ಣು ಹಾಕಿದ್ರೆ ಕಪ್ಪಾಗುತ್ತೆ, ಅಷ್ಟೇ ವ್ಯತ್ಯಾಸ).

  • ಗೋಮೂತ್ರದ ಬಳಕೆ: ಈ ಶಗಣಿ ಮತ್ತು ಮಣ್ಣನ್ನು ಕಲೆಸೋಕೆ ಸ್ವಲ್ಪ ಗೋಮೂತ್ರನ (ಗಂಜಲ) ಬಳಸಿ. ಶಗಣಿ ಬಹಳ ಗಟ್ಟಿಯಿದ್ರೆ ಸ್ವಲ್ಪ ನೀರು ಕೂಡ ಹಾಕಿ ಕಲೆಸಬಹುದು. (ಈಗ ಬೆಲ್ಲ-ಹಿಟ್ಟು ಹಾಕೋ ಅವಶ್ಯಕತೆನೂ ಇಲ್ಲ ಅಂತ ಮಲ್ಲೇಶಪ್ಪನವರು ಕಂಡುಕೊಂಡಿದ್ದಾರೆ).

  • ಚೆನ್ನಾಗಿ ಕಲೆಸಿ: ಇಷ್ಟನ್ನೆಲ್ಲಾ ಹಾಕಿ, ಶಗಣಿಯಲ್ಲಿ ಗಂಟು ಇಲ್ಲದಂಗೆ, ಸಲೀಸಾಗಿ ನಿಮ್ಮ ಕೈಯಾರೆ ಚೆನ್ನಾಗಿ ಕಲೆಸಿ.

  • ಪ್ಲಾಸ್ಟಿಕ್ ಹಾಸಿ ಮುಚ್ಚಿಡಿ: ನಿಮ್ಮ ಗಿಡದ ಬುಡದಲ್ಲಿ ಇಲ್ಲಾಂದ್ರೆ ನೆರಳಿರೋ ಜಾಗದಲ್ಲಿ ನೆಲದ ಮೇಲೆ ಒಂದು ಪ್ಲಾಸ್ಟಿಕ್ ಹಾಳೆ ಹಾಸಿ, ಅದರ ಮೇಲೆ ಈ ಶಗಣಿಯನ್ನು ಗುಡ್ಡೆ ಹಾಕಿ.

ಇಷ್ಟು ಮಾಡಿದ್ರೆ ನಿಮ್ಮ ಕೆಲಸ ಮುಗೀತು! ಮುಂದಿನ ಕೆಲಸ ಪ್ರಕೃತಿಗೆ ಬಿಟ್ಟುಬಿಡಿ. ಕೆಲವು ತಿಂಗಳಲ್ಲಿ ಅಲ್ಲೇ ಗೊಣ್ಣೆ ಹುಳಗಳು ಹುಟ್ಟಿಕೊಂಡು, ಈ ಶಗಣಿಯನ್ನು ತಿಂದು ಚಹಾ ಪುಡಿಯಂಥಾ ಶ್ರೇಷ್ಠ ಗೊಬ್ಬರ ಮಾಡಿ ನಿಮ್ಮ ಕೈಗಿಡುತ್ತವೆ.

ಇದನ್ನೂ ಓದಿ: ಕಬ್ಬು ಬೆಳೆದು ಎಕರೆಗೆ 100 ಟನ್ ಇಳುವರಿ ತೆಗೆಯೋದು ಹೆಂಗೆ? ಇಲ್ಲಿದೆ ನೋಡ್ರಿ ಕೃಷಿ ವಿಜ್ಞಾನಿಗಳ ಅಸಲಿ ಗುಟ್ಟು!

ಕಾಸಿಲ್ಲದೆ ಬಂಪರ್ ಲಾಭ! ಮಲ್ಲೇಶಪ್ಪನವರ ಈ ಲೆಕ್ಕಾಚಾರ ಕೇಳಿದ್ರೆ ದಂಗಾಗ್ತೀರಾ!

ಮಲ್ಲೇಶಪ್ಪನವರು ಕೊಡೋ ಈ ಲೆಕ್ಕಾಚಾರ ಕೇಳಿದ್ರೆ, ಎಂಥವರಿಗಾದ್ರೂ ಆಶ್ಚರ್ಯ ಆಗದೇ ಇರಲ್ಲ. ನಮ್ಮ ಕೈಲಿ ಹಸುವಿಲ್ಲ, ಕೊಟ್ಟಿಗೆ ಇಲ್ಲ ಅಂದ್ರೂ ಚಿಂತೆ ಇಲ್ಲ, ಈ ಲೆಕ್ಕಾಚಾರ ಒಮ್ಮೆ ನೋಡಿ:

  • ದಿನಕ್ಕೆ 50 ಕೆ.ಜಿ ಶಗಣಿ ಸಾಕು: ಒಬ್ಬ ರೈತ ತನ್ನ ಮನೇಲಿ ಹಸು ಇಲ್ಲಾಂದ್ರೂ, ಎಲ್ಲಾದ್ರೂ ಒಂದು ಕಡೆಯಿಂದ ದಿನಕ್ಕೆ 50 ಕೆ.ಜಿ ಶಗಣಿ ತಂದು ಕಲೆಸಿಟ್ಟರೆ ಸಾಕು.

  • ವರ್ಷಕ್ಕೆ 9 ಟನ್ ಗೊಬ್ಬರ: ಆ ಕಲೆಸಿದ ಶಗಣಿ ಒಣಗಿದಾಗ 25 ಕೆ.ಜಿ ಆಗುತ್ತೆ. ಇದನ್ನೇ ವರ್ಷದ 365 ದಿನ ಲೆಕ್ಕ ಹಾಕಿದ್ರೆ, ಒಟ್ಟು 9,125 ಕೆ.ಜಿ (ಅಂದ್ರೆ ಸುಮಾರು 9 ಟನ್) ಅಪ್ಪಟ ಬಂಗಾರದಂಥ ಗೊಬ್ಬರ ನಮ್ಮ ಕೈಸೇರುತ್ತೆ!

  • ಎಕರೆಗೆ ಬರೀ 400 ಕೆ.ಜಿ: ಇನ್ನೊಂದು ಮಜವಾದ ವಿಚಾರ ಅಂದ್ರೆ, ಒಂದು ಎಕರೆ ಹೊಲಕ್ಕೆ ಬರೀ 400 ಕೆ.ಜಿ ಯಷ್ಟು ಈ ಜವಾರಿ ಗೊಬ್ಬರ ಹಾಕಿದ್ರೆ ಸಾಕು!

  • 20 ಎಕರೆಗೆ ಭರ್ಜರಿ ಬೇಸಾಯ: ಅಂದ್ರೆ ನೀವೇ ಲೆಕ್ಕ ಹಾಕಿ, ಒಬ್ಬ ರೈತ ದಿನಕ್ಕೆ 50 ಕೆ.ಜಿ ಶಗಣಿ ಕಲೆಸಿದ್ರೂ, ವರ್ಷಕ್ಕೆ ಬರೋಬ್ಬರಿ 20 ಎಕರೆ ಜಮೀನಿಗೆ ಆರಾಮಾಗಿ ಒಕ್ಕಲುತನ ಮಾಡಬಹುದು.

ಎಂಥಾ ಅದ್ಭುತವಾದ ಲೆಕ್ಕಾಚಾರ ಅಲ್ವಾ? ಕಿಸೇಲಿ ಕಾಸಿಲ್ಲ ಅಂದ್ರೂ, ಹೊಲದಲ್ಲಿ ಬಂಗಾರ ಬೆಳೆಯೋಕೆ ಇದಕ್ಕಿಂತ ಒಳ್ಳೆ ದಾರಿ ಇನ್ನೆಲ್ಲಿದೆ ಹೇಳಿ!

ಕೋಟಿ ಕೊಟ್ರೂ ‘ಪೇಟೆಂಟ್’ ಬೇಡಂದ ರೈತ

ಇವರ ಈ ಅದ್ಭುತ ಕೃಷಿ ಪ್ರಯೋಗ ನೋಡಿ ಬಹಳಷ್ಟು ಜನ, “ಮಲ್ಲೇಶಪ್ಪ, ಇದಕ್ಕೆ ನೀನೊಂದು ಪೇಟೆಂಟ್ (Patent) ಮಾಡಿಸ್ಕೊ, ಭರ್ಜರಿ ದುಡ್ಡು ಮಾಡಬಹುದು” ಅಂತ ಸಲಹೆ ಕೊಟ್ರಂತೆ. ಆದರೆ, ಆ ಮಣ್ಣಿನ ಮಗ ಮಲ್ಲೇಶಪ್ಪನವರು ಕೊಟ್ಟ ಉತ್ತರ ಎಂಥವರ ಎದೆಯನ್ನೂ ಮುಟ್ಟುವಂತಿತ್ತು:

  • “ನಮ್ಮ ಅಜ್ಜ ಬರೀ 10 ರೂಪಾಯಿ ಕೂಲಿಗೆ 45 ದನ ಮೇಯಿಸ್ತಿದ್ದ. ಆತ ನೂರು ಗಾಡಿಯಷ್ಟು ಶಗಣಿ ತಂದು ಹೊಲಕ್ಕೆ ಹಾಕಿದ. ಅವನೆಂದೂ ಯಾವ ಪೇಟೆಂಟ್ ಕೂಡ ಕೇಳ್ಲಿಲ್ಲ.”

  • “ಇದು ಪ್ರಕೃತಿ ನಮಗೆ ಕೊಟ್ಟಿರೋ ಭಿಕ್ಷೆ. ನಾಡಿನ ಜನತೆಗೆ, ನಮ್ಮ ಮಕ್ಕಳಿಗೆ ವಿಷವಿಲ್ಲದ ಒಳ್ಳೆ ಊಟ ಸಿಗಲಿ ಅಂತ ಇದನ್ನ ಊರೆಲ್ಲಾ ಹಂಚುತ್ತೇನೆಯೇ ಹೊರತು, ದುಡ್ಡಿಗಾಗಿ ಪೇಟೆಂಟ್ ಮಾಡಲ್ಲ.”

ಇಷ್ಟೇ ಅಲ್ಲ, ಮಲ್ಲೇಶಪ್ಪನವರ ಈ ಖಡಕ್ ಮಾತು ಪ್ರತಿಯೊಬ್ಬ ರೈತನೂ ತಲೆಯಲ್ಲಿಟ್ಟುಕೊಳ್ಳಬೇಕಾದದ್ದು:

  • “ನನಗೆ ದೇವರು ಎಲ್ಲಿದ್ದಾನೆ ಅಂದ್ರೆ, ಆತ ನನ್ನ ಕೊಟ್ಟಿಗೆಯ ಶಗಣಿಯಲ್ಲೇ ಇದ್ದಾನೆ!”

  • “ಬರೀ ಉಗುಳು ನುಂಗಿದ್ರೆ ಹೊಟ್ಟೆ ತುಂಬಲ್ಲ, ಊಟ ಮಾಡಿದ್ರೆನೇ ಹೊಟ್ಟೆ ತುಂಬೋದು. ಹಾಗೇ ನಮ್ಮ ಭೂಮಿತಾಯಿಗೆ ಬೇಕಾಗಿರೋದು ರಸಗೊಬ್ಬರ ಅನ್ನೋ ವಿಷ ಅಲ್ಲ, ಹಸುವಿನ ಶಗಣಿ ಅನ್ನೋ ಜವಾರಿ ಊಟ!”

ಎಂಥಾ ಮಾತು ಅಲ್ವಾ? ಭೂಮಿತಾಯಿಯ ಮೇಲೆ ಇಂಥಾ ಭಕ್ತಿ ಇರೋದಕ್ಕೇ ಇವರ ಹೊಲದಲ್ಲಿ ಅಕ್ಷರಶಃ ಬಂಗಾರವೇ ಬೆಳೆಯುತ್ತಿರೋದು.

ಬಿಸಿ ರೊಟ್ಟಿ ಮಲ್ಲೇಶಪ್ಪ ಏನು ಹೇಳುತ್ತಾರೆ ನೀವೇ ನೋಡಲು ಇಲ್ಲಿ ಕ್ಲಿಕ್ ಮಾಡಿ

ಭೂಮಿತಾಯಿಯ ಋಣ ತೀರಿಸೋಣ ಬನ್ನಿ!

ರೈತ ಬಾಂಧವರೇ, ಸಾಲ ಮಾಡಿ ರಸಗೊಬ್ಬರ ತಂದು ಭೂಮಿತಾಯಿಯನ್ನು ಬರಡು ಮಾಡುವ ಬದಲು, ರೈತರಿಗೆ ತಮ್ಮ ಮಣ್ಣನ್ನು ಮತ್ತೆ ಫಲವತ್ತಾಗಿ ಮಾಡಿಕೊಳ್ಳಲು ಇದೊಂದು ಸುವರ್ಣ ಅವಕಾಶ. ನಮ್ಮ ಕೊಟ್ಟಿಗೆಯಲ್ಲಿರುವ ಹಸುವಿನ ಶಗಣಿಯನ್ನೇ ಅಮೃತವನ್ನಾಗಿ ಬದಲಾಯಿಸೋಣ.

  • ರೈತ ಅಣ್ಣತಮ್ಮಂದಿರೇ, ಸಾಲ-ಸೂಲ ಮಾಡಿ ಕೆಮಿಕಲ್ ಗೊಬ್ಬರ ತಂದು ನಮ್ಮ ಹೊಲವನ್ನು ಬರಡು ಮಾಡಿದ್ದು ಸಾಕು.

  • ನಮ್ಮ ಕೊಟ್ಟಿಗೆಯಲ್ಲಿ ಬಿದ್ದಿರೋ ಶಗಣಿಯನ್ನೇ ಬಂಗಾರ ಮಾಡಿಕೊಳ್ಳೋಕೆ, ಮಣ್ಣಿನ ಸತ್ವ ಹೆಚ್ಚಿಸಿಕೊಳ್ಳೋಕೆ ನಮಗಿದೊಂದು ಸುವರ್ಣ ಅವಕಾಶ.

  • ಕಾಸಿಲ್ಲದೆ ಬಂಪರ್ ಬೆಳೆ ತೆಗೆಯೋ ಈ ದೇಸಿ ಪದ್ಧತಿ ಇವತ್ತೇ ಶುರುವಾಗಲಿ. ನೀವು ಬೆಳೆಯೋ ಪ್ರತಿಯೊಂದು ಬೆಳೆಗೂ ಈ ಜವಾರಿ ಗೊಬ್ಬರವೇ ಉಸಿರಾಗಲಿ.

ನೀವು ಬೆಳೆಯುವ ಪ್ರತಿಯೊಂದು ಬೆಳೆಗೂ ಈ ದೇಶಿ ಗೊಬ್ಬರವೇ ಜೀವಾಳವಾಗಲಿ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಇತರ ರೈತ ಸ್ನೇಹಿತರೊಂದಿಗೂ ಹಂಚಿಕೊಳ್ಳಿ. ಇಂಥದ್ದೇ ನಿಖರ ಹಾಗೂ ಉಪಯುಕ್ತ ಮಾಹಿತಿಗಳಿಗಾಗಿ ‘ಮಾಹಿತಿ ಸಂಚಾರಿ’ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಿ.

Leave a Comment