Telegram Join My Telegram WhatsApp Join My WhatsApp

ಕಬ್ಬಿನ ಬೆಳೆ ಕೈ ಹಿಡಿಯಬೇಕಾ? ಮಣ್ಣು ಮುತ್ತಿನಂತಿರಲಿ! ಕಬ್ಬಿನ ರೋಗ ಮತ್ತು ಮಣ್ಣಿನ ಆರೈಕೆ ಬಗ್ಗೆ ಕಂಪ್ಲೀಟ್ ಗೈಡ್.

ಕಬ್ಬಿನ ಬೆಳೆ ಕೈ ಹಿಡಿಯಬೇಕಾ? ಮಣ್ಣು ಮುತ್ತಿನಂತಿರಲಿ! ಕಬ್ಬಿನ ರೋಗ ಮತ್ತು ಮಣ್ಣಿನ ಆರೈಕೆ ಬಗ್ಗೆ ಕಂಪ್ಲೀಟ್ ಗೈಡ್.

ಏನ್ರೀ ಸಾವಕಾರ್ರೆ, ಎಲ್ಲರೂ ಆರಾಮಾಗಿದ್ದೀರಿ ತಾನೇ? ನಿಮ್ಮ ಕಡೆ ಮಳೆ-ಬೆಳೆ ಹದವಾಗಿ ಆಗೈತಾ?ನಾವೆಲ್ಲಾ ಮೈಬಗ್ಗಿಸಿ ಹಗಲಿರುಳು ದುಡೀತೀವಿ. ಆದ್ರೆ ಎಷ್ಟೋ ಸಲ ಕೈಗೆ ಬಂದ ತುತ್ತು ಬಾಯಿಗೆ ಬರೋದಿಲ್ಲ ನೋಡ್ರಿ.

ಇದಕ್ಕೆ ಕಾರಣ ಏನ್ಗೊತ್ತಾ? ನಾವು ಬೆಳೆ ಮ್ಯಾಲೆ ತೋರಿಸೋ ಪ್ರೀತಿಯನ್ನ, ಅನ್ನ ಕೊಡೋ ಮಣ್ಣಿನ ಮ್ಯಾಲೆ ತೋರಿಸೋದೇ ಇಲ್ಲ!ನಮ್ಮ ಸರ್ವಜ್ಞರು ಹೇಳಿದ ಹಾಗೆ, “ಬಿತ್ತನೆಗೆ ಮೆತ್ತನೆ ಮಣ್ಣು ಲೇಸು”. ಒಕ್ಕಲತನ ಮಾಡೋಕೆ ಮಣ್ಣು ಯಾವಾಗಲೂ ಮೆತ್ತಗಿರಬೇಕು.

ಹೊಲದಾಗ ಬರಿಗಾಲಲ್ಲಿ ಅಡ್ಡಾಡಿದ್ರೆ, ಕಾಲಿಗೆ ಮುಳ್ಳು ಚುಚ್ಚಿದಂಗೆ ಕಠಿಣ ಇರಬಾರದು. ಹಂಗಿದ್ರೆ ಮಾತ್ರ ನಿಮ್ಮ ಭೂಮಿಗೆ ತಾಕತ್ತು ಇದೆ ಅಂತ ಅರ್ಥ. ಬನ್ನಿ, ಕಬ್ಬು ಬೆಳೆಯೋರು ಮಾಡೋ ತಪ್ಪುಗಳು ಯಾವುವು? ಕಬ್ಬಿನ ರೋಗಗಳನ್ನ ಹೆಂಗೆ ಓಡಿಸೋದು ಅಂತ ನಮ್ಮೂರ ಭಾಷೆಯಲ್ಲೇ ತಿಳ್ಕೊಳ್ಳೋಣ.

ಕಬ್ಬಿನ ಬೆಳೆ ಕೈ ಹಿಡಿಯಬೇಕಾ?

ಭೂಮಿ ತಾಯಿಗೆ ಕೊಳ್ಳಿ ಇಡಬೇಡ್ರಿ!

ನಾವೆಲ್ಲ ಮಾಡೋ ಅತೀ ದೊಡ್ಡ ತಪ್ಪು ಏನಪ್ಪಾ ಅಂದ್ರೆ, ಕಬ್ಬು ಕಡಿದ ಮ್ಯಾಲೆ ಹೊಲದಾಗ ಉಳಿಯೋ ರವದಿಗೆ (ಒಣಗಿದ ಎಲೆಗೆ) ಬೆಂಕಿ ಇಡೋದು. ಆಳುಗಳು ಸಿಗಲ್ವಲ್ಲ, ಹೊಲ ಜಲ್ದಿ ಕ್ಲೀನ್ ಆಗ್ಲಿ ಅಂತ ರಾತ್ರೋರಾತ್ರಿ ಹೋಗಿ ಕೊಳ್ಳಿ ಇಟ್ಟು ಬಂದುಬಿಡ್ತೀವಿ.

ಹಿಂಗೇ ಬೆಂಕಿ ಹಚ್ಚಿದ್ರೆ, ಮಣ್ಣಿನಾಗ ಇರೋ ರೈತಮಿತ್ರ ಜೀವಾಣುಗಳೆಲ್ಲ ಬೆಂದು ಬೂದಿಯಾಗ್ತವೆ ನೋಡ್ರಿ. ಇದರಿಂದ ನಮ್ಮ ಭೂಮಿ ತಾಯಿ ತನ್ನ ತಾಕತ್ತು ಕಳಕೊಂಡು ಪೂರ್ತಿ ಬರಡಾಗಿ ಬಿಡ್ತಾಳೆ.

ಇದರ ಬದ್ಲು ಆ ಕಬ್ಬಿನ ರವದಿಯನ್ನ ಕಬ್ಬಿನ ಸಾಲಿನಾಗೇ ಬಿಟ್ಟು, ಅದರ ಮ್ಯಾಲೆ ಸ್ವಲ್ಪ ಕಾಂಪೋಸ್ಟ್ ಕಲ್ಚರ್ ಹಾಕಿ ಕಳಿಸಿರಿ. ಒಂದು ಎಕರೆಗೆ 40 ಟನ್ ಕಬ್ಬು ಬಂದ್ರೆ, ಕನಿಷ್ಠ 4 ಟನ್ ರವದಿ ಸಿಗುತ್ತೆ. ಅದನ್ನೇ ಗೊಬ್ಬರ ಮಾಡಿದ್ರೆ ನಿಮ್ಮ ಹೊಲಕ್ಕೆ ಆನೆ ಬಲ ಬಂದಂಗೆ ಆಗುತ್ತೆ ನೋಡ್ರಿ.

ರವದಿ ಸುಡೋದ್ರಿಂದ ಆಗೋ ನಷ್ಟ, ಮಣ್ಣಿಗೆ ಸೇರಿಸೋದ್ರಿಂದ ಆಗೋ ಲಾಭ:

  • ಗೊಣ್ಣೆ ಹುಳು ಕಾಟ ಜಾಸ್ತಿ: ಮಣ್ಣಿನ ಜೀವಾಣುಗಳು ಸತ್ತೋದ್ರೆ ಹೊಲದಾಗ ಗೊಣ್ಣೆ ಹುಳುಗಳ ಕಾಟ ವಿಪರೀತ ಆಗೈತಿ. ಕಾಪಾಡೋರೆ ಇಲ್ದಾಗ ಶತ್ರುಗಳು ಮೆರೀತವೆ ತಾನೇ?

  • ಹೊಲದಾಗೇ ಗೊಬ್ಬರ ಫ್ಯಾಕ್ಟರಿ: ಆ ಕಬ್ಬಿನ ರವದಿಯನ್ನ ಸಾಲಿನಾಗೇ ಬಿಟ್ಟು, ಸ್ವಲ್ಪ ನೀರು ಹಾಯಿಸಿ, ಕಾಂಪೋಸ್ಟ್ ಕಲ್ಚರ್ ಹಾಕಿ. ಬೆಂಕಿ ಹಾಕೋ ಬದ್ಲು ಮಣ್ಣಿನಾಗೇ ಕರಗಿಸಿದ್ರೆ ಅದೇ ಮಸ್ತ್ ನೈಸರ್ಗಿಕ ಗೊಬ್ಬರ ಆಗುತ್ತೆ.

  • ಆನೆ ಬಲ, ಅರ್ಧ ಖರ್ಚು: ಒಂದು ಎಕರೆಗೆ 40 ಟನ್ ಕಬ್ಬು ಬಂದ್ರೆ, ಕನಿಷ್ಠ 4 ಟನ್ ರವದಿ ಸಿಗುತ್ತೆ. ಆ ಕಸಾನೇ ಗೊಬ್ಬರ ಆದ್ರೆ ರಸಗೊಬ್ಬರದ ಖರ್ಚು ಅರ್ಧಕ್ಕರ್ಧ ಉಳಿಯುತ್ತೆ.

ಹಿಂಗೇ ರವದಿಯನ್ನ ಸುಡೋ ಬದ್ಲು ಮಣ್ಣಿಗೆ ಸೇರಿಸಿದ್ರೆ ನಿಮ್ಮ ಹೊಲಕ್ಕೆ ಆನೆ ಬಲ ಬಂದಂಗೆ ಆಗುತ್ತೆ, ಕಬ್ಬಿನ ಇಳುವರಿನೂ ಭರ್ಜರಿ ಆಗಿ ಬರ್ತೈತಿ ನೋಡ್ರಿ!

ಮೂರು ಶಕ್ತಿಗಳು ಇದ್ರೆ ಮಾತ್ರ ಕಬ್ಬಿಗೆ ಜೀವ!

ಕಬ್ಬು ನಳನಳಿಸ್ತಾ ಬೆಳೆಯೋಕೆ ಮುಖ್ಯವಾಗಿ ಮೂರು ಶಕ್ತಿಗಳು ಬೇಕಾಗುತ್ತೆ. ಒಂದನೇದು ‘ಸೌರ ಶಕ್ತಿ’ ಅಂದ್ರೆ ನಮ್ ಸೂರ್ಯನ ಬಿಸಿಲು. ಈ ಸೂರ್ಯನ ಬಿಸಿಲು ಕಬ್ಬಿನ ಗಿಡದ ಮ್ಯಾಲೆ ಸರಿಯಾಗಿ ಬೀಳಬೇಕು, ಆಗ ಮಾತ್ರ ಗಿಡಕ್ಕೆ ಚೈತನ್ಯ ಬರೋದು.

ಎರಡನೇದು ‘ಜಲಶಕ್ತಿ’ ಅಂದ್ರೆ ನೀರು. ನಮಗೆ ಬಾಯಾರಿಕೆ ಆದಾಗ ಒಂದು ಗ್ಲಾಸ್ ನೀರು ಕುಡಿದು ಆರಾಮ್ ಆಗ್ತೀವಿ ತಾನೇ? ಆದ್ರೆ ಕಬ್ಬಿಗೆ ಹಂಗೆ ಮಾಡಲ್ಲ, ಒಟ್ನಲ್ಲಿ ನೀರು ಸಿಕ್ತು ಅಂತ ಹೊಲಕ್ಕೆಲ್ಲಾ ಕಂಡಾಪಾಟ್ಟೆ ನೀರು ಹಾಯಿಸಿಬಿಡ್ತೀವಿ. ನೆನಪಿಟ್ಕೊಳ್ರಿ, ನೀರು ಹಾಯಿಸೋದು ಬೇರೆ, ಕಬ್ಬಿಗೆ ನೀರು ಕುಡಿಸೋದು ಬೇರೆ. ಅದಕ್ಕೆ ಎಷ್ಟು ಬೇಕೋ ಅಷ್ಟೇ ನೀರು ಕೊಡಬೇಕು.

ಮೂರನೇದು ‘ಜೀವಶಕ್ತಿ’ ಅಂದ್ರೆ ಕಬ್ಬಿನ ಆಹಾರ. ಮಣ್ಣಿನಾಗ ಸರಿಯಾದ ಪೋಷಕಾಂಶ ಇದ್ರೆ ಮಾತ್ರ ಕಬ್ಬು ಹುಲುಸಾಗಿ ಬೆಳೆಯುತ್ತೆ. ಈ ಮೂರು ಶಕ್ತಿಗಳನ್ನ ಸರಿಯಾಗಿ ಬ್ಯಾಲೆನ್ಸ್ ಮಾಡಿದ್ರೆ, ನಿಮ್ಮ ಹೊಲದಾಗೂ ಕನಿಷ್ಠ ಅಂದ್ರೂ ಎಕರೆಗೆ 60-70 ಟನ್ ಕಬ್ಬು ಆರಾಮಾಗಿ ತೆಗೀಬಹುದು ನೋಡ್ರಿ.

ಇದನ್ನೂ ಓದಿ: ಆರೋಗ್ಯದ ಗುಟ್ಟು ನಿಮ್ಮ ರಾತ್ರಿ ಊಟದಲ್ಲಿದೆ: ಡಾಕ್ಟರ್ ಹೇಳುವ ಈ ಮಾತು ಕೇಳಿದ್ರೆ ನೀವೇ ದಂಗಾಗ್ತೀರಾ!

ಸಾವಯವ ಗೊಬ್ಬರವೇ ನಮ್ಮ ಕಬ್ಬಿಗೆ ಜೀವಾಮೃತ!

ಇವತ್ತು ನಮ್ಮ ಮಣ್ಣಿನಾಗ ಸಾವಯವ ಇಂಗಾಲದ (Organic Carbon) ಸತ್ವ ಬಹಳ ಕಮ್ಮಿ ಆಗಿಬಿಟ್ಟೈತಿ. ಒಳ್ಳೆ ಬೆಳೆ ಬರಕ್ ಕನಿಷ್ಠ 0.75% ಇರಬೇಕಾದ್ದು, ಈಗ ಬರೀ 0.3% ಗೆ ಬಂದು ನಿಂತೈತಿ. ಹಿಂಗಿದ್ರೆ ನೀವು ಎಷ್ಟೇ ರಸಗೊಬ್ಬರ ಸುರಿದ್ರೂ ಕಬ್ಬು ದಪ್ಪ ಆಗಂಗಿಲ್ಲ ನೋಡ್ರಿ.

ನಮ್ ಕಡೆ ಈಗ ಮುಂಚಿನ ಹಂಗ ದನ-ಕರುಗಳಿಲ್ಲ, ತಿಪ್ಪೆ ಗೊಬ್ಬರ ಎಲ್ಲಿಂದ ತರೋದು ಅಂತ ನೀವೇನು ಚಿಂತೆ ಮಾಡ್ಬೇಡ್ರಿ. ಕೃಷಿ ಇಲಾಖೆಯಾಗ 50% ಸಬ್ಸಿಡಿ ದರದಲ್ಲಿ ದಯಂಚಿ (Dainchi) ಬೀಜ ಕೊಡ್ತಾರ, ಅದನ್ನ ತಗೊಂಡು ಬನ್ರಿ.

ಒಂದು ಎಕರೆಗೆ 25 ಕೆಜಿ ದಯಂಚಿ ಬೀಜ ತಂದು ಹೊಲದಾಗ ದಟ್ಟವಾಗಿ ಚೆಲ್ಲಿರಿ. ಒಂದೂವರೆ ತಿಂಗಳಿಗೆ ಆ ಗಿಡಕ್ಕೆ ಹೂವು ಬರೋ ಟೈಮಿಗೆ, ಹೊಲದಾಗೇ ರೋಟೊವೇಟರ್ ಹೊಡೆದು ಮಣ್ಣಿಗೆ ಸೇರಿಸಿಬಿಡ್ರಿ.

ಹಿಂಗೇ ಮಾಡಿದ್ರೆ ಸಾಕು, ನಿಮ್ಮ ಹೊಲದಾಗೇ ಭರ್ಜರಿ 6 ಟನ್ ನೈಸರ್ಗಿಕ ಗೊಬ್ಬರ ತಯಾರಾಗುತ್ತೆ. ಇದರಿಂದ ನಿಮ್ಮ ಮಣ್ಣಿನ ತಾಕತ್ತು ಹೆಚ್ಚಾಗಿ, ಬೆಳೆ ಕೂಡ ಮಸ್ತ್ ಆಗಿ ಬರುತ್ತೆ.

ಕಬ್ಬಿನ ಹೊಲದ ಮೂರು ಮಹಾಮಾರಿ ಶತ್ರುಗಳು!

ಕಬ್ಬಿನ ಹೊಲದಲ್ಲಿ ಮುಖ್ಯವಾಗಿ ಮೂರು ತರಹದ ರೋಗಗಳು ಮತ್ತು ಹುಳುಗಳು ಕಾಟ ಕೊಡ್ತವೆ. ಅವನ್ನ ಹೆಂಗೆ ಮಟ್ಟ ಹಾಕೋದು ಅಂತ ಇಲ್ಲಿ ನೋಡ್ರಿ.

1. ಗೊಣ್ಣೆ ಹುಳುವಿನ ಕಾಟ (White Grub)

ಈ ಗೊಣ್ಣೆ ಹುಳು ಕಬ್ಬಿನ ಬೇರನ್ನೇ ತಿಂದು ಹೊಲಾನೇ ನಾಶ ಮಾಡುತ್ತೆ. ಎಕರೆಗೆ 50 ಟನ್ ಬರೋ ಕಬ್ಬು 20 ಟನ್‌ಗೆ ಇಳಿಯುತ್ತೆ. ಇದು ಬೇಸಿಗೆ ಮಳೆ (ಮೇ-ಜೂನ್) ಆದ ತಕ್ಷಣ ಭೂಮಿಯಿಂದ ದುಂಬಿಯಾಗಿ ಹೊರಬರುತ್ತೆ. ಹೊರಬಂದು ಗಿಡಗಳ ಮೇಲೆ ಕೂತು ಮೊಟ್ಟೆ ಇಡುತ್ತೆ.

  • ದುಂಬಿ ಹಿಡಿಯಿರಿ: ಮಳೆ ಆದ ರಾತ್ರಿ ಹೊಲದ ಬದುವಿನಲ್ಲಿ ಬೇವಿನ ಅಥವಾ ಜಾಲಿ ಟೊಂಗೆಗಳನ್ನು ಕತ್ತರಿಸಿ ಇಡಿ. ದುಂಬಿಗಳು ಅಲ್ಲಿಗೆ ಬಂದು ಕೂರುತ್ತೆ, ಆಗ ಕೀಟನಾಶಕ ಹೊಡೆದು ಸಾಯಿಸಿ.

  • ಲೈಟ್ ಟ್ರ್ಯಾಪ್: ಹೊಲದಲ್ಲಿ ಸೋಲಾರ್ ಟ್ರ್ಯಾಪ್ ಅಥವಾ ಲೈಟ್ ಟ್ರ್ಯಾಪ್ ಇಟ್ಟರೆ, ರಾತ್ರಿ ವೇಳೆ ದುಂಬಿಗಳು ಬೆಳಕಿಗೆ ಆಕರ್ಷಿತವಾಗಿ ಬಂದು ಸಾಯುತ್ತವೆ.

  • ಮಾಗಿ ಉಳುಮೆ (Summer Ploughing): ಹಿಂಗಾರು ಬೆಳೆ ಮುಗಿದ ಮೇಲೆ ಹೊಲವನ್ನ ಆಳವಾಗಿ ಉಳುಮೆ ಮಾಡಿ. ಆಗ ಮಣ್ಣಿನೊಳಗಿನ ಹುಳುಗಳು ಬಿಸಿಲಿಗೆ ಒಣಗುತ್ತವೆ, ಹಕ್ಕಿಗಳು ಬಂದು ತಿನ್ನುತ್ತವೆ.

  • ಜೈವಿಕ ಅಸ್ತ್ರ (Metarhizium): ಮೆಟರೈಸಿಯಂ (Metarhizium anisopliae) ಅನ್ನೋ ಫಂಗಸ್ ಪುಡಿಯನ್ನ ತಿಪ್ಪೆಗೊಬ್ಬರದ ಜೊತೆ ಸೇರಿಸಿ ಜೂನ್-ಜುಲೈ ತಿಂಗಳಲ್ಲಿ ಹೊಲಕ್ಕೆ ಹಾಕಿ. ಇದು ಗೊಣ್ಣೆ ಹುಳುವಿಗೆ ನೂರಕ್ಕೆ ನೂರು ರಾಮಬಾಣ.

2. ಬಿಳಿ ಕಸ ಅಥವಾ ಉರಿಮಲ್ಲೆ ರೋಗ (Striga Weed)

ನೀರಿನ ಕೊರತೆ ಇದ್ದಾಗ ಮತ್ತು ಮಣ್ಣು ತನ್ನ ಸತ್ವ ಕಳೆದುಕೊಂಡಾಗ ಈ ಬಿಳಿ ಕಸ ಅಥವಾ ಉರಿಮಲ್ಲೆ ಕಾಟ ಶುರುವಾಗುತ್ತೆ.ಇದು ಕಬ್ಬಿನ ಬೇರಿಗೆ ಅಂಟಿಕೊಂಡು, ಕಬ್ಬು ತಿನ್ನೋ ಗೊಬ್ಬರ, ನೀರನ್ನೆಲ್ಲ ತಾನೇ ಕುಡಿಯುತ್ತೆ. ಇದರ ಒಂದು ಸಣ್ಣ ಗಿಡ ಸುಮಾರು 5 ಲಕ್ಷ ಬೀಜ ಬಿಡುತ್ತೆ! ಭೂಮಿಯಲ್ಲಿ ಬಿದ್ದರೆ 20 ವರ್ಷಗಳ ಕಾಲ ಸಾಯದೆ ಹಾಗೇ ಇರುತ್ತೆ.

  • ಮೋಸದ ಬೆಳೆ (Trap Crop): ಕಬ್ಬಿನ ಜೊತೆ ಅಥವಾ ಕಬ್ಬು ಹಾಕುವ ಮೊದಲು ಸೂರ್ಯಕಾಂತಿ, ಸೋಯಾಬೀನ್ ಅಥವಾ ಕಡಲೆ ಬೆಳೆಯಿರಿ.

  • ಈ ಗಿಡಗಳ ಬೇರು ಬಿಡುವ ರಸಕ್ಕೆ ಮರುಳಾಗಿ ಬಿಳಿ ಕಸ ಮೊಳಕೆ ಒಡೆಯುತ್ತೆ. ಆದರೆ ಊಟ ಸಿಗದೆ ಅಲ್ಲೇ ಸತ್ತು ಹೋಗುತ್ತೆ.

  • ಕ್ಯಾಚ್ ಕ್ರಾಪ್ (Catch Crop): ಆಫ್ರಿಕನ್ ಮೇವಿನ ಜೋಳವನ್ನು ಬೆಳೆದು 45 ದಿನಕ್ಕೆ ಬೇರು ಸಮೇತ ಕಿತ್ತು ಬಿಸಾಡಿ. ಅದರ ಬೇರಿನ ಜೊತೆ ಉರಿಮಲ್ಲೆಯೂ ನಾಶವಾಗುತ್ತೆ.

3. ಪೊಕ್ಕ ಬೊಂಗ (Pokkah Boeng) – ಹೊಸ ಮಹಾಮಾರಿ!

ಇದೊಂದು ಹೊಸ ತರಹದ ರೋಗ. ನಮ್ಮ ಕಡೆ ಇದನ್ನ ಚಂಡಿ ರೋಗ ಅಥವಾ ಗಂಟು ರೋಗ ಅಂತಲೂ ಕರೀತಾರೆ.ಕಬ್ಬಿನ ಸುಳಿ (ಮೇಲ್ಭಾಗ) ಬೆಳ್ಳಗಾಗಿ, ಎಲೆಗಳು ಸುಕ್ಕಟ್ಟಿಕೊಂಡು, ಕಬ್ಬು ಮೇಲ್ಗಡೆ ಬೆಳೆಯೋದೇ ನಿಂತು ಹೋಗುತ್ತೆ. ಇದು ಗಾಳಿ, ಮಳೆ ಮತ್ತು ‘ಮಿಲಿಬಗ್’ ಅನ್ನೋ ಸಣ್ಣ ಕೀಟದಿಂದ ಹರಡುತ್ತದೆ. ಬೀಜದಿಂದಲೂ ಈ ರೋಗ ಬರುತ್ತೆ.

  • ಸ್ವಚ್ಛತೆ ಇರಲಿ: ಹೊಲದಲ್ಲಿ ಕಳೆ, ಕಸ-ಕಡ್ಡಿ ಇಲ್ಲದಂತೆ ನೋಡಿಕೊಳ್ಳಿ. ಇರುವೆಗಳು ಬರದಂತೆ ತಡೆಯಿರಿ, ಏಕೆಂದರೆ ಇರುವೆಗಳು ರೋಗ ಹರಡುತ್ತವೆ.

  • ಸುಟ್ಟು ಹಾಕಿ: ಕಬ್ಬಿನ ಮೇಲ್ಭಾಗ ಕೊಳೆತಿದ್ದರೆ, ಅದನ್ನ ಚಾಕುವಿನಿಂದ ಕತ್ತರಿಸಿ ಹೊಲದಿಂದ ಹೊರಗೆ ತಂದು ಸುಟ್ಟು ಹಾಕಿ.

  • ಬೀಜೋಪಚಾರ ಕಡ್ಡಾಯ: ಕಬ್ಬು ನಾಟಿ ಮಾಡುವ ಮುನ್ನ ಬೀಜಗಳನ್ನು ಔಷಧದ ನೀರಿನಲ್ಲಿ (Imidacloprid + Propiconazole) 20 ನಿಮಿಷ ನೆನೆಸಿ ನೆಡಬೇಕು.

ಇದನ್ನೂ ಓದಿ:  ರಾಜಕೀಯ ‘ಘರ್ ವಾಪಸಿ’ HDK: ಬಿಜೆಪಿ ಜೊತೆ ಮೈತ್ರಿ, 2028ರಲ್ಲಿ ಸಿಎಂ ಕುರ್ಚಿಗೆ ತಂತ್ರ?

ಕಬ್ಬಿನ ಬೀಜ ತರೂವಾಗ ಜರಾ ಹುಷಾರಾಗಿರ್ರಿ!

ನಾವೆಲ್ಲಾ ನಮ್ ಮನೆಗೆ ಸೊಸೆ ತರಬೇಕಾದ್ರೆ ಏನೇನ್ ಮಾಡ್ತೀವಿ ಹೇಳ್ರಿ? ಅವರ ಮನೆ, ಕುಲ-ಗೋತ್ರ, ಗುಣ-ಸ್ವಭಾವ ಎಲ್ಲಾ ಹತ್ತು ಜನರಿಗೆ ವಿಚಾರಿಸಿ, ಖಾತ್ರಿ ಮಾಡ್ಕೊಂಡೇ ತರ್ತೀವಿ ಅಲ್ವಾ?

ಹಂಗೇ ನಮ್ ಹೊಲಕ್ಕೆ ಕಬ್ಬಿನ ಬೀಜ (ಗಣಿಕೆ) ತರೂವಾಗ್ಲೂ ಜರಾ ವಿಚಾರ ಮಾಡಬೇಕು. ಕುಳಿತಲ್ಲಿಂದಾನೇ ಬರೀ ಯಾರಿಗೋ ಫೋನಿನಾಗೆ ಆರ್ಡರ್ ಕೊಟ್ಟು ಹೊಲಕ್ಕೆ ಬೀಜ ತರಿಸೋಕೆ ಹೋಗ್ಬೇಡ್ರಿ.

ನೀವೇ ಖುದ್ದಾಗಿ ಬೀಜ ತರೋ ಹೊಲಕ್ಕೆ ಹೋಗಿ, ಇಡೀ ಹೊಲ ಅಡ್ಡಾಡಿ ಕಣ್ಣಾರೆ ನೋಡಿ ಬರ್ರಿ. ಆ ಕಬ್ಬು ಹೆಂಗೆ ಬೆಳೆದೈತಿ, ಏನಾದ್ರೂ ರೋಗ ಬಿದ್ದೈತಾ ಅಂತ ಚಲೋತಂಗೆ ಪರೀಕ್ಷೆ ಮಾಡ್ಕೊಳ್ರಿ.

ಬೀಜದ ಹೊಲದಲ್ಲಿ ಈ ರೋಗಗಳು ಇದ್ರೆ ಆ ಕಡೆ ತಲೆನೂ ಹಾಕಬ್ಯಾಡ್ರಿ:

  • ಕೆಂಪು ಕೊಳೆ ರೋಗ (Red Rot): ತಜ್ಞರು ಇದನ್ನ “ಸಿಹಿ ಕಬ್ಬಿಗೆ ಕಹಿ ರೋಗ” ಅಂತ ಕರೀತಾರೆ. ಇದು ಬಂದ್ರೆ ಕಬ್ಬಿನಾಗ ಜ್ಯೂಸ್ ಇರಲ್ಲ, ಸಕ್ಕರೆನೂ ಆಗಲ್ಲ. ಇದು ಒಂಥರಾ ಕ್ಯಾನ್ಸರ್ ಇದ್ದಂಗೆ, ಮನುಷ್ಯರಿಗೂ ಕೆಟ್ಟದ್ದು ಮಾಡ್ತೈತಿ.

  • ಕಾಡಿಗೆ ರೋಗ (Smut): ಕಬ್ಬಿನ ಸುಳಿಯೆಲ್ಲಾ ಕಪ್ಪಗೆ ಕಾಡಿಗೆ ತರಹ ಆಗೈತಾ ನೋಡಿ. ಇದು ಬಂದ್ರೆ ಇಡೀ ಬೆಳೆ ಕರಕಲಾಗಿ ಹೋಗ್ತೈತಿ.

  • ಪೈನಾಪಲ್ ರೋಗ: ಇದು ಕೂಡ ಬೀಜದಿಂದಲೇ ಹರಡೋ ಮಹಾಮಾರಿ ರೋಗ. ಈ ರೋಗದ ಸೋಂಕು ಸ್ವಲ್ಪ ಕಂಡ್ರೂ ಆ ಹೊಲದಿಂದ ಬೀಜ ತರಲೇಬಾರದು.

ಇಂಥಾ ರೋಗ ಇದ್ದ ಹೊಲದಿಂದ ನೀವೇನಾದ್ರೂ ಬೀಜ ತಂದ್ರೆ ಮುಗೀತು ಕತೆ! ನಿಮ್ಮ ಚಲೋ ಹೊಲಕ್ಕೂ ಆ ಕ್ಯಾನ್ಸರ್ ತರಹದ ರೋಗ ಅಂಟಿಕೊಂಡು ಬಿಡ್ತೈತಿ, ಮುಂದಿನ ಹತ್ತು ವರ್ಷ ನೀವು ಒದ್ದಾಡಬೇಕಾಗುತ್ತೆ ನೋಡ್ರಿ.

ಇನ್ನೊಂದು ಕಿವಿಮಾತು ಅಂದ್ರೆ, ನೀವು ತಂದಿರೋ ಬೀಜ ಎಷ್ಟೇ ಚಲೋ ಇದ್ರೂ ‘ಬೀಜೋಪಚಾರ’ (Seed Treatment) ಮಾಡೋದನ್ನ ಮಾತ್ರ ಮರೀಬ್ಯಾಡ್ರಿ.

ಕಬ್ಬಿನ ಗಣಿಕೆಗಳನ್ನ ನಾಟಿ ಮಾಡೋಕಿಂತ ಮೊದಲು, ತಜ್ಞರು ಹೇಳಿದ ಔಷಧದ ನೀರಿನಾಗ (Imidacloprid + Propiconazole) ಒಂದು 20 ನಿಮಿಷ ಅದ್ದಿ ತೆಗೆದು ಆಮೇಲೆ ನಾಟಿ ಮಾಡ್ರಿ. ಆಗ ರೋಗ ನಿಮ್ಮ ಹೊಲದ ಕಡೆ ತಲೆನೂ ಹಾಕಲ್ಲ.

ಮುಂದಿನ ಪೀಳಿಗೆಗೆ ಮಣ್ಣನ್ನು ಉಳಿಸಿ

ನಮ್ಮ ಹೊಲ ನಮಗೆ ಗುಡಿ-ಗುಂಡಾರ ಇದ್ದಂಗೆ ನೋಡ್ರಿ. ಬರೀ ಯೂರಿಯಾ, ಡಿಎಪಿ ಅಂತ ರಸಗೊಬ್ಬರಗಳನ್ನ ತಂದು, ತಲೆಗೆ ಬಂದಂಗೆ ಮಣ್ಣಿಗೆ ಸುರಿಯೋದನ್ನ ಮೊದಲು ಬಿಡ್ರಿ.

ಭೂಮಿ ಒಳಗ ರೈತಮಿತ್ರ ಜೀವಾಣುಗಳು ಉಸಿರಾಡ್ತಾ ಇದ್ರೆ ಮಾತ್ರ, ನಮ್ ಕಬ್ಬು ಹುಲುಸಾಗಿ ನಳನಳಿಸ್ತೈತಿ. ಕಬ್ಬು ಅನ್ನೋದು ಸೋಮಾರಿಗಳ ಬೆಳೆ ಅಲ್ಲ ನೋಡ್ರಿ. “ಕಬ್ಬು ಹಚ್ಚೀನಿ, ಇನ್ನೇನಿದ್ರೂ ಊರೂರು ಅಡ್ಡಾಡ್ತೀನಿ” ಅಂದ್ರೆ ಖಂಡಿತ ನಡೆಯಂಗಿಲ್ಲ.

ದಿನಾ ಬೆಳ್ಳಂಬೆಳಗ್ಗೆ ಎದ್ದು ಹೊಲಕ್ಕೆ ಹೋಗಿ ಆ ಕಬ್ಬಿನ ಗಿಡಗಳ ಜೊತೆ ಮಾತಾಡಬೇಕು, ಅದರ ಕಷ್ಟ-ಸುಖನೂ ಕೇಳ್ಕೊಬೇಕು. ಹಂಗಾದ್ರೆ ಮಾತ್ರ ಎಕರೆಗೆ 60-70 ಟನ್ ಕಬ್ಬು ಬೆಳೆದು, ನಮ್ಮ-ನಿಮ್ಮ ಬದುಕು ಬಂಗಾರ ಆಗೋದು ನೋಡ್ರಿ.

ಈ ಮಾಹಿತಿ ನಿಮಗೂ ಖರೆ ಅನ್ನಿಸಿದ್ರೆ, ನಿಮ್ಮೂರ ರೈತರಿಗೂ ಇದನ್ನ ಶೇರ್ ಮಾಡಿ ಕಳಿಸಿಕೊಡ್ರಿ. ಎಲ್ಲರೂ ಓದಿ ತಿಳ್ಕೊಳ್ಳಿ, ಎಲ್ಲರೂ ಚೆನ್ನಾಗಿ ಬೆಳೆದು ನಗೋಣ. ಜೈ ಕಿಸಾನ್!

Leave a Comment