ದುಡಿದ ದುಡ್ಡು ಜೇಬಲ್ಲಿ ನಿಲ್ತಿಲ್ವಾ ನಿಮ್ಮ ಕನಸು ನನಸಾಗೋಕೆ ಈ ಹಣ ಉಳಿತಾಯದ ಸೂತ್ರಗಳನ್ನೊಮ್ಮೆ ಓದಿ
ಎಲ್ಲರಿಗೂ ನಮಸ್ಕಾರೀ ಹೆಂಗಿದ್ದೀರಿ ಇವತ್ತಿನ ಕಾಲದಲ್ಲಿ ಎಷ್ಟೇ ದುಡ್ದ್ರು ಕೈಲಿ ನಿಲ್ಲಲ್ವಲ್ಲಾ ಅಂತ ತಲೆಮೇಲೆ ಕೈಹೊತ್ತು ಕೂರೋರ ಸಂಖ್ಯೆನೇ ಜಾಸ್ತಿ ಆಗಿಬಿಟ್ಟಿದೆ. ಊರು ಬಿಟ್ಟು ಪೇಟೆಗೆ ಹೋಗಿ, ಹಗಲಿರುಳು ಕಷ್ಟಪಟ್ಟು ದುಡಿತೀವಿ. ಆದ್ರೆ ತಿಂಗಳ ಕೊನೆ ಬಂತು ಅಂದ್ರೆ ಸಾಕು, ಜೇಬು ಖಾಲಿ
ಮೂವತ್ತು ಸಾವಿರ ಸಂಬಳ ತಗೊಳ್ಳೋನಿಗೂ ಅದೇ ಗೋಳು, ಲಕ್ಷಗಟ್ಟಲೆ ಸಂಪಾದನೆ ಮಾಡೋನಿಗೂ ಅದೇ ಗೋಳು. ದುಡಿದ ಹಣವೆಲ್ಲಾ ಎಲ್ಲಿಗೆ ಹೋಗ್ತಿದೆ ಅಂತ ಲೆಕ್ಕ ಹಾಕೋಕೆ ಹೋದ್ರೆ ತಲೆ ಕೆಟ್ಟು ಹೋಗುತ್ತೆ.
ನಾವೆಲ್ಲಾ ದುಡಿಯೋದು ಯಾಕ್ರೀ ನಮ್ಮದೇ ಆದ ಸ್ವಂತದ್ದೊಂದು ಸೂರು ಕಟ್ಟಬೇಕು, ಹೆಂಡ್ತಿಗೆ ಒಂಚೂರು ಒಡವೆ ಮಾಡಿಸಬೇಕು, ಮಕ್ಳನ್ನ ಒಳ್ಳೆ ಸ್ಕೂಲಿಗೆ ಕಳಿಸಬೇಕು. ಹಾಗೇ, ಊರಿಗೆ ಹೋಗುವಾಗ ನಮ್ಮದೇ ಆದ ಒಂದು ಸಣ್ಣ ಕಾರಿನಲ್ಲಿ ಹೋಗಬೇಕು ಅಂತ ನಮಗೂ ನಿಮಗೂ ಎಲ್ಲರಿಗೂ ಆಸೆ ಇದ್ದೇ ಇರುತ್ತೆ ಅಲ್ವಾ
ಆದ್ರೆ ಆ ಕನಸುಗಳೆಲ್ಲಾ ಬರೀ ಕನಸಾಗೇ ಉಳಿದುಬಿಟ್ಟಿದೆ. ಇದೆಲ್ಲಾ ಯಾಕಾಗುತ್ತೆ ನಾವು ಎಲ್ಲಿ ಎಡವುತ್ತಿದ್ದೀವಿ ದುಡಿದ ಹಣನ ಹೆಂಗೆ ಉಳಿಸಬೇಕು ಬನ್ನಿ, ಇದನ್ನೆಲ್ಲಾ ನಿಮಗೆಲ್ಲಾ ಆಪ್ತವಾಗಿ ಅರ್ಥ ಆಗೋ ತರ ಬಿಡಿಸಿ ಹೇಳ್ತೀನಿ.
ನಿಮ್ಮ ಖರ್ಚಿನ ಪಕ್ಕಾ ಲೆಕ್ಕಾಚಾರ ಹಾಕಿ
ನಾವು ಮಾಡೋ ಅತೀ ದೊಡ್ಡ ತಪ್ಪು ಅಂದ್ರೆ, ನಮ್ಮ ಖರ್ಚಿನ ಬಗ್ಗೆ ನಮಗೆ ಯಾವ ಲೆಕ್ಕಾನು ಇರಲ್ಲ. ದುಡ್ಡು ಬರುತ್ತೆ, ಖರ್ಚು ಮಾಡ್ತೀವಿ. ಅದಕ್ಕೆ ಮೊದಲು ನೀವು ಮಾಡಬೇಕಾಗಿರೋದು ಖರ್ಚಿನ ಬ್ಲೂಪ್ರಿಂಟ್ ಮಾಡಿಕೊಳ್ಳೋದು.
ಅಂದ್ರೆ ಪಕ್ಕಾ ಲೆಕ್ಕಾಚಾರ ಹಾಕೋದು. ಒಂದು ತಿಂಗಳಿಗೆ ಎಷ್ಟೆಷ್ಟು ಖರ್ಚಾಗುತ್ತೆ ಅನ್ನೋದನ್ನ ಒಂದು ಕಡೆ ಬರೆದಿಟ್ಟುಕೊಳ್ಳಿ. ಖರ್ಚುಗಳನ್ನ ಎರಡು ಭಾಗ ಮಾಡಿ.
-
ಬೇಕೇ ಬೇಕಾದ ಖರ್ಚುಗಳು: ಮನೆ ಬಾಡಿಗೆ, ರೇಷನ್, ಬಸ್ಸು-ರೈಲು-ಪೆಟ್ರೋಲ್ ಖರ್ಚು, ಕರೆಂಟ್ ಬಿಲ್. ಇವೆಲ್ಲ ನಾವು ಮಾಡಲೇಬೇಕಾದ ಖರ್ಚುಗಳು.
-
ಬೇಡದ ಖರ್ಚುಗಳು: ವೀಕೆಂಡ್ ಬಂತು ಅಂತ ಪಾರ್ಟಿ ಮಾಡೋದು, ಬೇಡದಿದ್ದರೂ ಹೊರಗಡೆ ಊಟ ಮಾಡೋದು.
-
ಕಡಿತಗೊಳಿಸಬಹುದಾದ ಖರ್ಚುಗಳು: ಟಿವಿಗೆ, ಮೊಬೈಲ್ ಗೆ ಬೇಕಾಬಿಟ್ಟಿ ರೀಚಾರ್ಜ್ ಮಾಡೋದು. ಇವೆಲ್ಲಾ ನಾವು ಕಡಿತಗೊಳಿಸಬಹುದಾದ ಖರ್ಚುಗಳು.
ಯಾವುದಕ್ಕೆ ಹಣ ಹಾಕಬೇಕು, ಯಾವುದಕ್ಕೆ ಕತ್ತರಿ ಹಾಕಬೇಕು ಅಂತ ಮೊದಲು ನೀವೇ ನಿರ್ಧಾರ ಮಾಡ್ಕೋಬೇಕು.ಪಾರ್ಟಿ ಮಾಡೋದನ್ನ ಸ್ವಲ್ಪ ದಿನ ಮುಂದೂಡಿದ್ರೆ, ನಾಳೆ ನೀವೇ ಊರಲ್ಲಿ ಸ್ವಂತ ಮನೆ ಕಟ್ಟಿ ಅಲ್ಲಿ ಇಡೀ ಊರಿಗೆ ಭರ್ಜರಿ ಊಟ ಹಾಕಿಸಬಹುದು
ಇದನ್ನೂ ಓದಿ: ಗೃಹ ಜ್ಯೋತಿ ಯೋಜನೆ ಉಚಿತ ವಿದ್ಯುತ್ ಲೆಕ್ಕಾಚಾರ 200 ಯೂನಿಟ್ ಫ್ರೀ ಅಸಲಿ ಸತ್ಯ ಇಲ್ಲಿದೆ Gruha Jyothi Scheme
ಏನಿದು 50-30-20 ರೂಲ್
ನೀವು ಕೇಳಿರಬಹುದು, ಪೇಟೆ ಕಡೆ ಒಂದ್ ರೂಲ್ ಫಾಲೋ ಮಾಡ್ತಾರೆ, ಅದೇ 50-30-20 ರೂಲ್ಅಂ ತ. ಇದು ತುಂಬಾನೇ ಸಿಂಪಲ್ ಗುರುವೇ.
-
50% (ಅಗತ್ಯ ವೆಚ್ಚ): ನಿಮ್ಮ ಸಂಬಳದಲ್ಲಿ ಶೇಕಡಾ 50 ರಷ್ಟು ಹಣನ ನಿಮ್ಮ ‘ಅಗತ್ಯ ಖರ್ಚು’ಗಳಿಗೆ (ಮನೆ ಬಾಡಿಗೆ, ಊಟ, ರೇಷನ್) ಅಂತ ತೆಗೆದಿಡಿ.
-
30% (ಆಯ್ಕೆ ವೆಚ್ಚ): ಇನ್ನು 30 ರಷ್ಟು ಹಣನ ನಿಮ್ಮ ‘ಆಸೆ’ಗಳಿಗೆ, ಅಂದ್ರೆ ಎಲ್ಲಾದ್ರೂ ಹೊರಗಡೆ ಹೋಗೋಕೆ, ಏನಾದ್ರು ತಗೋಳೋಕೆ ಅಂತ ಇಟ್ಕೊಳ್ಳಿ.
-
20% (ಉಳಿತಾಯ): ಉಳಿದ 20 ರಷ್ಟು ಹಣನ ಕಡ್ಡಾಯವಾಗಿ ‘ಉಳಿತಾಯ’ (Savings) ಮಾಡಲೇಬೇಕು.
ಈಗ ನೀವು ಅನ್ಕೋಬಹುದು, ನಮ್ ಸಂಬಳನೇ ಕಮ್ಮಿ ಸ್ವಾಮಿ, ನಾವೆಲ್ಲಿ 20% ಸೇವಿಂಗ್ಸ್ ಮಾಡೋದು ಅಂತ.ಅಂತವರು 40-30-30 ರೂಲ್ ಫಾಲೋ ಮಾಡಿ. ಮನಸ್ಸಿದ್ದರೆ ಮಾರ್ಗ ಅಲ್ವಾ ಖರ್ಚು ಕಡಿಮೆ ಮಾಡಿದ್ರೆ ಉಳಿತಾಯ ತಾನಾಗೇ ಆಗುತ್ತೆ.
-
ನಿಮ್ಮ ಅಗತ್ಯ ಖರ್ಚುಗಳನ್ನ 40% ಗೆ ಇಳಿಸಿಕೊಳ್ಳಿ.
-
ನಿಮ್ಮ ಆಸೆಗಳ ಖರ್ಚನ್ನ 30% ನಲ್ಲಿ ನಿಭಾಯಿಸಿ.
-
ಹಾಗೂ ಉಳಿತಾಯನ (Savings) 30% ಗೆ ಏರಿಸಿ.
ಸಾಲದ ಸುಳಿಯಿಂದ ಆಚೆ ಬನ್ನಿ
ಇನ್ನೊಂದು ದೊಡ್ಡ ರೋಗ ಅಂದ್ರೆ ಈ ಸಾಲದ ಬಾದೆ. ಅದರಲ್ಲೂ ಈ ಕ್ರೆಡಿಟ್ ಕಾರ್ಡ್, ಆನ್ಲೈನ್ ಸಾಲ ಅಂತ ಬಂತು ನೋಡಿ, ಜನ ಅದಕ್ಕೇ ಮರುಳಾಗಿ ಬಿಡ್ತಾರೆ. ಕೈಯಲ್ಲಿ ಕಾಸಿಲ್ಲ ಅಂದ್ರು ಪ್ಲಾಸ್ಟಿಕ್ ಕಾರ್ಡ್ ಗೀಚಿ ವಸ್ತುಗಳನ್ನ ತಗೋತಾರೆ. ಆಮೇಲೆ ತಿಂಗಳು ತಿಂಗಳು ಇಎಂಐ (EMI) ಕಟ್ಟೋಕೆ ಒದ್ದಾಡ್ತಾರೆ.
-
ನಿಮ್ಮ ಕನಸು ನನಸಾಗಬೇಕು ಅಂದ್ರೆ ಮೊದಲು ಈ ಸಾಲದ ಸುಳಿಯಿಂದ ಆಚೆ ಬರಬೇಕು.
-
ಅತೀ ಅವಶ್ಯಕತೆ ಇದ್ದರೆ ಮಾತ್ರ ಸಾಲ ಮಾಡಿ. ಸುಖಾಸುಮ್ಮನೆ ಆನ್ಲೈನ್ ಸಾಲಗಳ ಮೊರೆ ಹೋಗಬೇಡಿ.
-
ಹೆಚ್ಚು ಬಡ್ಡಿ ಇರೋ ಸಾಲನ (ಉದಾಹರಣೆಗೆ ಕ್ರೆಡಿಟ್ ಕಾರ್ಡ್ ಸಾಲ ಅಥವಾ ಕೈ ಸಾಲ) ಆದಷ್ಟು ಬೇಗ ತೀರಿಸಿಬಿಡಿ.
ಪಕ್ಕದ ಮನೇಯವನು ದೊಡ್ಡ ಕಾರು ತಗೊಂಡ, ಎದುರು ಮನೇಯವನು ಹೊಸ ಬೈಕ್ ತಗೊಂಡ ಅಂತ ನಾವೂ ಸಾಲ ಮಾಡಿ ತಗೋಳೋಕೆ ಹೋದ್ರೆ ಕಷ್ಟ. ಕಡೆಗೆ ಊಟಕ್ಕೂ ತತ್ವಾರ ಆಗಬಹುದು, ಎಚ್ಚರ ನಮ್ಮ ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚಬೇಕು.
ಮುಂದಿನ ದಿನಗಳಿಗೆ ಪಕ್ಕಾ ಗುರಿ ಇರಲಿ
ಹಣ ಉಳಿಸಬೇಕು ಅಂದ್ರೆ ಸುಮ್ನೆ ಉಳಿಸೋದಲ್ಲ, ಅದಕ್ಕೊಂದು ಪಕ್ಕಾ ಗುರಿ ಇರಬೇಕು. ಭವಿಷ್ಯದ ಬಗ್ಗೆ ಸ್ಪಷ್ಟತೆ ಇದ್ದರೆ ಮಾತ್ರ ಸೇವಿಂಗ್ಸ್ ಮಾಡೋಕೆ ಒಳಗಿನಿಂದ ಹುಮ್ಮಸ್ಸು ಬರುತ್ತೆ.
-
ಇನ್ನೈದು ವರ್ಷದಲ್ಲಿ ನಾನು ನಿವೃತ್ತಿಗಾಗಿ 5 ಲಕ್ಷ ರೂಪಾಯಿ ಕೂಡಿಡ್ತೀನಿ.
-
ಮಕ್ಳ ಓದಿಗಾಗಿ 10 ವರ್ಷದಲ್ಲಿ 10 ಲಕ್ಷ ಸೇರಿಸ್ತೀನಿ.
-
ಮೂರು ವರ್ಷದಲ್ಲಿ ಒಂದು ಕಾರು ತಗೋತೀನಿ, ಅದಕ್ಕೆ 3 ಲಕ್ಷ ಕೂಡಿಡ್ತೀನಿ.
ಹಿಂಗೆ ನಿಮಗೊಂದು ಪಕ್ಕಾ ಗುರಿ ಇರಬೇಕು. ಗುರಿ ಇಟ್ಕೊಂಡ್ರೆ, ಅದನ್ನ ಮುಟ್ಟಲೇಬೇಕು ಅನ್ನೋ ಛಲ ತಾನಾಗೇ ಬರುತ್ತೆ. ಮೂರು ಲಕ್ಷ ಕೂಡಿಡಬೇಕು ಅಂತ ಗುರಿ ಇಟ್ಟರೆ, ಕೊನೆಪಕ್ಷ ಎರಡು ಲಕ್ಷವಾದರೂ ನಿಮ್ಮ ಅಕೌಂಟ್ ನಲ್ಲಿ ಗ್ಯಾರಂಟಿ ಉಳಿಯುತ್ತೆ. ಇದು ಸತ್ಯ
ಇದನ್ನೂ ಓದಿ: 2006ರ ಭಾಗ್ಯಲಕ್ಷ್ಮಿ ಬಾಂಡ್ ಪಡೆದವರಿಗೆ ಭರ್ಜರಿ ಸಿಹಿಸುದ್ದಿ ಲಕ್ಷ ಲಕ್ಷ ಹಣ ಪಡೆಯುವುದು ಹೇಗೆ ಸಂಪೂರ್ಣ ಮಾಹಿತಿ
ಕಾಣದಂಗೆ ಕಾಸು ಕೂಡಿಡೋದು ಹೇಗೆ
ನಮ್ಮ ಕೈಗೆ ಹಣ ಬಂದ್ರೆ, ಅದು ಹೆಂಗೆ ಖರ್ಚಾಗುತ್ತೆ ಅಂತ ನಮಗೇ ಗೊತ್ತಾಗಲ್ಲ ಅಲ್ವಾ ಅದಕ್ಕೆ ಒಂದು ಸೂಪರ್ ಟ್ರಿಕ್ ಇದೆ.ಅದೇ ಆಟೋಮ್ಯಾಟಿಕ್ ಸೇವಿಂಗ್ಸ್ (Automatic Savings).
-
ತಿಂಗಳ ಮೊದಲನೇ ತಾರೀಖು ಸಂಬಳ ಬಂದ ತಕ್ಷಣ, ಬ್ಯಾಂಕಿನಿಂದ ತಾನಾಗೇ ಕಟ್ ಆಗೋ ಹಾಗೆ ಮಾಡಿ.
-
ಒಂದು 2000ನೋ, 5000ನೋ ಕಟ್ ಆಗಿ ಬೇರೆ ಅಕೌಂಟ್ ಗೋ ಅಥವಾ ಎಸ್ಐಪಿ (SIP) ಗೋ ಹೋಗೋ ಹಾಗೆ ಸೆಟ್ ಮಾಡಿ.
ಕಣ್ಣಿಗೆ ಕಂಡ್ರೆ ಅಲ್ವಾ ನಾವು ಖರ್ಚು ಮಾಡೋದು ಅದು ತಾನಾಗೇ ಕಟ್ ಆದ್ರೆ, ಆ ದುಡ್ಡು ನಮ್ಮ ಹತ್ರ ಇಲ್ಲ ಅಂತ ನಾವೇ ಅಂದುಕೊಳ್ತೀವಿ. ಹೋಗ್ಲಿ ಬಿಡು, ಉಳಿದಿರೋ ಕಾಸಲ್ಲೇ ಈ ತಿಂಗಳು ಕಳೆಯೋಣ ಅಂತ ನಾವೇ ಅಡ್ಜಸ್ಟ್ ಆಗ್ತೀವಿ. ಇದು ಹಣ ಉಳಿಸೋಕೆ ಇರುವಂತ ಅತಿ ಸುಲಭದ ದಾರಿ.
ಎಮರ್ಜೆನ್ಸಿ ಫಂಡ್ ಇರಲೇಬೇಕು
ಮನುಷ್ಯನ ಜೀವ, ಯಾವಾಗ ಏನ್ ಕಾಯಿಲೆ ಬರುತ್ತೆ, ಯಾವಾಗ ಕೆಲಸ ಹೋಗುತ್ತೆ ಅಂತ ಯಾರಿಗೂ ಗೊತ್ತಿರಲ್ಲ.ಇಂತ ಕಷ್ಟದ ಕಾಲದಲ್ಲಿ ನಮ್ಮ ಕೈ ಹಿಡಿಯೋದೇ ಎಮರ್ಜೆನ್ಸಿ ಫಂಡ್ (ಆಪತ್ಕಾಲದ ನಿಧಿ). ಕಷ್ಟ ಬಂದಾಗ ಬೇರೆಯವರ ಹತ್ತಿರ ಕೈಯೊಡ್ಡಿ ನಿಲ್ಲೋದಕ್ಕಿಂತ, ನಾವು ಕೂಡಿಟ್ಟ ಹಣನೇ ನಮಗೆ ದೇವರಾಗಿ ಬರುತ್ತೆ.
-
ಕನಿಷ್ಠ ಪಕ್ಷ ಮುಂದಿನ ಮೂರರಿಂದ ಆರು ತಿಂಗಳಿಗೆ ನಿಮ್ಮ ಸಂಸಾರ ಸಾಗಿಸಲು ಎಷ್ಟು ಹಣ ಬೇಕಾಗುತ್ತೋ, ಅಷ್ಟು ಹಣನ ಬ್ಯಾಂಕಿನಲ್ಲಿ ಕೂಡಿಡಿ.
-
ಉದಾಹರಣೆಗೆ ಆರು ತಿಂಗಳಿಗೆ ನಿಮ್ಮ ಮನೆ ಖರ್ಚಿಗೆ 5 ಲಕ್ಷ ಬೇಕು ಎಂದರೆ, ಅದನ್ನು ಮೊದಲೇ ಸೇರಿಸಿಟ್ಟುಕೊಳ್ಳಿ.
-
ಆ ಹಣನ ಯಾವ ಕಾರಣಕ್ಕೂ ಬೇರೆ ಆಸೆಗಳಿಗೆ, ಮದುವೆ-ಮುಂಜಿಗಳಿಗೆ ಮುಟ್ಟಬೇಡಿ.
ಗುರಿಗಳನ್ನಆಗಾಗ ಅಪ್ಡೇಟ್ ಮಾಡ್ತಾಇರಿ
ಒಂದ್ ಮಾತು ನೆನಪಿಟ್ಕೊಳ್ಳಿ ಗುರುವೇ, ಮನುಷ್ಯನಿಗೆ ಆಸೆ ಅನ್ನೋದು ಯಾವತ್ತೂ ಮುಗಿಯಲ್ಲ, ಹಾಗಂತ ನಾವು ಸುಮ್ಮನೆ ಕೂರಬಾರದು. ಇಷ್ಟು ದಿನ ಒದ್ದಾಡಿ ಒಂದು ಸಾಲ ತೀರಿಸಿದ್ರಿ ಅಥವಾ ನಿಮ್ಮ ಬೈಕಿನ ಒಂದು ಇಎಂಐ (EMI) ಕೊನೆಗೂ ಮುಗೀತು ಅಂದ್ಕೊಳ್ಳಿ. ಆವಾಗ ನಮ್ಮ ಕೈಲಿ ಒಂದ್ಚೂರು ಕಾಸು ಓಡಾಡೋಕೆ ಶುರುವಾಗುತ್ತೆ. ಮನಸ್ಸಿಗೆ ಒಂಥರಾ ರಿಲೀಫ್ ಸಿಗುತ್ತೆ.
ಆಗ ಅಬ್ಬಾ, ಸಾಲ ಮುಗೀತು ಬಿಡು, ಇನ್ಮುಂದೆ ಈ ದುಡ್ಡಲ್ಲಿ ಬೇರೆ ಏನಾದ್ರು ತಗೊಂಡು ಮಜಾ ಮಾಡೋಣ ಅಂತ ಆ ಹಣನ ಮತ್ತೆ ಬೇರೆ ಯಾವುದೋ ಅನಗತ್ಯ ಖರ್ಚಿಗೆ ಹಾಕಬೇಡಿ.
ಇಷ್ಟು ದಿನ ಆ ಇಎಂಐ ಕಟ್ಟೋಕೆ ಹೆಂಗೆ ಕಷ್ಟಪಡ್ತಿದ್ರೋ, ಅದೇ ಕಷ್ಟನ ನೆನಪಲ್ಲಿ ಇಟ್ಕೊಂಡು, ಆ ಉಳಿದ ಹಣನ ನೇರವಾಗಿ ನಿಮ್ಮ ಉಳಿತಾಯದ (Savings) ಖಾತೆಗೆ ಹಾಕಿ.
-
ಹೊಸ ಗುರಿ ಕಟ್ಟಿ: ಹಳೆ ಗುರಿ ಮುಟ್ಟಿದ ತಕ್ಷಣ ನಿಮ್ಮ ಸೇವಿಂಗ್ಸ್ ಪ್ಲಾನ್ ನಿಲ್ಲಿಸಬೇಡಿ. ತಕ್ಷಣ ಇನ್ನೊಂದು ಹೊಸ ಗುರಿಯನ್ನ ಸೆಟ್ ಮಾಡ್ಕೋಬೇಕು.
-
ಬೈಕ್ ಇಂದ ಸೈಟ್ ಕಡೆಗೆ: ಮೊದಲು ಕಷ್ಟಪಟ್ಟು ಬೈಕ್ ತಗೊಂಡ್ರೆ, ನೆಕ್ಸ್ಟ್ ಊರಲ್ಲಿ ಒಂದು ಸಣ್ಣ ಸೈಟ್ (Site) ಅಥವಾ ಹೊಲ ತಗೊಳೋಕೆ ದುಡ್ಡು ಕೂಡಿಡೋಕೆ ಶುರು ಮಾಡಿ. ಬೈಕ್ ಮುಗೀತು ಅಂತ ಸುಮ್ನಾದ್ರೆ, ಸೈಟ್ ತಗೊಳೋ ಕನಸು ಕನಸಾಗೇ ಉಳಿಯುತ್ತೆ!
-
ಆಸೆ ಇರಲಿ, ದಾಸರಾಗಬೇಡಿ: ನಾನು ಮೊದಲೇ ಹೇಳಿದ ಹಾಗೆ, ಆಸೆಗಳನ್ನ ಈಡೇರಿಸಿಕೊಳ್ಳಿ. ಅದರಲ್ಲಿ ತಪ್ಪೇನಿಲ್ಲ. ಆದ್ರೆ, ಆ ಆಸೆಗಳ ದಾಸರಾಗಿ ಸಾಲದ ಸುಳಿಗೆ ಸಿಲುಕಬೇಡಿ.
ನಮ್ ದುಡಿಮೆ ಹತ್ತು ರೂಪಾಯಿ ಇದ್ರೆ, ಖರ್ಚು ಎಂಟು ರೂಪಾಯಿ ಇರಬೇಕು. ದುಡಿಮೆಗಿಂತ ಖರ್ಚು ಜಾಸ್ತಿಯಾಗದಂತೆ ನೋಡುಕೊಳ್ಳುವುದೇ ಮನುಷ್ಯನ ನಿಜವಾದ ಶ್ರೀಮಂತಿಕೆ
ಇದನ್ನೂ ಓದಿ: ಬರೀ ಒಂದು ಮಿಸ್ಡ್ ಕಾಲ್ ಕೊಡಿ: ಎಸ್ಬಿಐ (SBI) ಯಿಂದ ಮನೆಬಾಗಿಲಿಗೆ ಬರಲಿದೆ ₹50 ಲಕ್ಷದವರೆಗಿನ ಸಾಲ
ಮುಂದಿನ ಭವಿಷ್ಯಕ್ಕೆಇಂದೇ ಉಳಿತಾಯ
ಬಿಸಿಲಲ್ಲಿ ಬೆವರಿಳಿಸಿ, ಹಗಲಿರುಳು ನಿದ್ದೆ ಬಿಟ್ಟು ದುಡಿಯೋದು ನಮ್ಮೆಲ್ಲರ ಕರ್ತವ್ಯ ಹೌದು. ಆದ್ರೆ, ಆ ಕಷ್ಟಪಟ್ಟು ದುಡಿದ ದುಡ್ಡನ್ನ ಸುಖಾಸುಮ್ಮನೆ ಪೋಲು ಮಾಡದೆ, ನಾಳೆಗೋಸ್ಕರ ಉಳಿಸೋದು ನಮ್ಮ ನಿಜವಾದ ಜಾಣ್ಮೆ.
ಬರೀ ದುಡಿಯೋದ್ರಲ್ಲಿ ಮಾತ್ರವಲ್ಲ ಗುರುವೇ, ಕೂಡಿಡೋದ್ರಲ್ಲೂ ನಮ್ಮ ಬುದ್ಧಿವಂತಿಕೆ ಇರಬೇಕು. ನಮ್ಮ ಹಿರಿಯರು ಸುಮ್ನೆ ಹೇಳಿಲ್ಲ, ಇವತ್ತು ನಾವು ಕಾಸನ್ನ ಉಳಿಸಿದ್ರೆ, ನಾಳೆ ಕಷ್ಟದ ಕಾಲದಲ್ಲಿ ಅದೇ ಕಾಸು ನಮ್ಮನ್ನ ಉಳಿಸುತ್ತೆ ಅಂತ.
ನಾಳೆ ಯಾರಿಗಾದ್ರೂ ಹುಷಾರಿಲ್ಲ ಅಂದಾಗ, ಮಕ್ಳನ್ನ ದೊಡ್ಡ ಸ್ಕೂಲಿಗೆ ಸೇರಿಸಬೇಕು ಅಂದಾಗ, ಅಥವಾ ದಿಢೀರ್ ಅಂತ ಏನಾದ್ರೂ ಖರ್ಚು ಬಂದಾಗ, ಯಾರ ಮುಂದೆಯೂ ಕೈ ಕಟ್ಟಿ ನಿಲ್ಲೋ ಪರಿಸ್ಥಿತಿ ಬರಬಾರದು ಅಲ್ವಾ
ಅವಾಗ ನಾವು ಕೂಡಿಟ್ಟ ಇದೇ ಹಣ ನಮಗೆ ದೇವರ ತರ ಬಂದು ಕಾಪಾಡುತ್ತೆ. ನಾನು ಮೇಲೆ ಹೇಳಿದ ಈ ಸಣ್ಣ ಸಣ್ಣ ನಿಯಮಗಳನ್ನ ಇವತ್ತಿಂದಾನೇ ಚಾಚೂ ತಪ್ಪದೆ ಪಾಲಿಸಿ ನೋಡಿ:
-
ನಿಮ್ಮ ಊರಿನಲ್ಲಿ, ಎಲ್ಲರೂ ಅಚ್ಚರಿ ಪಡೋ ಹಾಗೆ ನಿಮ್ಮದೇ ಆದ ಸ್ವಂತ ಮನೆ ಕಟ್ಟೋ ಕನಸು.
-
ಆ ನಿಮ್ಮ ಹೊಸ ಮನೆಗೆ ಅದ್ದೂರಿಯಾಗಿ ಗೃಹಪ್ರವೇಶ ಮಾಡೋ ಸಂಭ್ರಮ.
-
ನಿಮ್ಮ ಕಷ್ಟದಲ್ಲಿ ಜೊತೆಯಾದ ಹೆಂಡತಿಗೆ ಇಷ್ಟವಾದ ಬಂಗಾರದ ಒಡವೆ ಮಾಡಿಸಿಕೊಡೋ ಆಸೆ.
-
ನಿಮ್ಮ ಮಕ್ಳಿಗೆ ಒಳ್ಳೆ ಭವಿಷ್ಯ ಕಟ್ಟಿಕೊಡೋ ಗುರಿ.
ಇವೆಲ್ಲವೂ ನೂರಕ್ಕೆ ನೂರು ನನಸಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ ಸ್ವಲ್ಪ ತಾಳ್ಮೆ ಮತ್ತು ಶಿಸ್ತು ಇದ್ರೆ ಸಾಕು.ಇಷ್ಟೆಲ್ಲಾ ಓದಿದ ಮೇಲೆ ನಿಮಗೂ ಹೌದಲ್ವಾ, ಇನ್ಮುಂದೆ ನಾನೂ ಪಕ್ಕಾ ಲೆಕ್ಕ ಹಾಕಿ ಕಾಸು ಉಳಿಸಬೇಕು ಅನ್ನಿಸ್ತಿದೆ ತಾನೇ ಹಾಗಾದ್ರೆ ತಡ ಮಾಡ್ಬೇಡಿ, ಇವತ್ತಿಂದಾನೇ ಶುರು ಮಾಡಿ.
ಈ ನಮ್ಮ ಹಳ್ಳಿ ಸೊಗಡಿನ, ಆಪ್ತವಾದ ಲೇಖನ ನಿಮಗೆ ನಿಜಕ್ಕೂ ಇಷ್ಟ ಆಗಿದ್ರೆ, ನಿಮ್ಮ ವಾಟ್ಸಾಪ್ (WhatsApp) ಹಾಗೂ ಫೇಸ್ಬುಕ್ಗಳಲ್ಲಿ ನಿಮ್ಮ ಸ್ನೇಹಿತರಿಗೆ, ಬಂಧು-ಬಳಗದವರಿಗೆಲ್ಲಾ ತಪ್ಪದೆ ಶೇರ್ ಮಾಡಿ.
ಅವರಿಗೂ ಹಣ ಹೆಂಗೆ ಉಳಿಸಬೇಕು, ಸಾಲದಿಂದ ಹೆಂಗೆ ಆಚೆ ಬರಬೇಕು ಅನ್ನೋದನ್ನ ತಿಳಿಸಿಕೊಡಿ. ಎಲ್ಲರೂ ಕಲಿಲಿ, ಎಲ್ಲರೂ ಆರ್ಥಿಕವಾಗಿ ಬೆಳೆಯಲಿ, ಎಲ್ಲರ ಮನೆಲೂ ನೆಮ್ಮದಿ ತುಂಬಿರಲಿ ಅನ್ನೋದೇ ನಮ್ಮ ಆಸೆ.