ಬ್ಯಾಂಕಿಗೆ ದುಡ್ಡು ಕಟ್ಟೋ ಮುನ್ನ ಇರಲಿ ಎಚ್ಚರ: ಹಳ್ಳಿ ಜನ ತಿಳಿಯಲೇಬೇಕಾದ 8 ಹೊಸ ಇನ್ಕಮ್ ಟ್ಯಾಕ್ಸ್ ರೂಲ್ಸ್!
ಎಲ್ಲರೂ ಆರಾಮಾಗಿದ್ದೀರಾ ಅಂತ ಅಂದುಕೊಂಡಿದ್ದೀನಿ. ನಮ್ಮ ಹಳ್ಳಿ ಕಡೆ ಬೆಳಗಾದ್ರೆ ನಮಗೆ ಹೊಲ, ಗದ್ದೆ, ತೋಟ, ದನಕರುಗಳದ್ದೇ ಚಿಂತೆ.ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಕ್ಕಾಗ, ಆ ರೊಕ್ಕವನ್ನ ಕೈಯಲ್ಲೇ ಎಣಿಸಿ ಕಿಸೇಲಿ ಇಟ್ಕೊಂಡು ಮನೆಗೆ ಬರೋ ಮಜಾನೇ ಬೇರೆ ಅಲ್ವಾ
ನಮ್ಮ ಜನರಿಗೆ ಆನ್ಲೈನ್, ಫೋನ್ಪೇ ಗಿಂತ ಕೈಯಲ್ಲಿ ಕರಕರ ಅನ್ನೋ ನೋಟು ಸಿಕ್ರೆನೇ ಒಂಥರಾ ನೆಮ್ಮದಿ.ಆದರೆ, ಈಗ ಕಾಲ ಬದಲಾಗಿದೆ ಕಣ್ರಪ್ಪಾ. ಸರ್ಕಾರ ನಮಗಿಂತ ಒಂದು ಹೆಜ್ಜೆ ಮುಂದಿದೆ.
ಬರುವ 2026 ರ ಏಪ್ರಿಲ್ 1 ರಿಂದ ಆದಾಯ ತೆರಿಗೆ ಇಲಾಖೆ (Income Tax Department) ನಮ್ಮ ನಗದು (ಕ್ಯಾಶ್) ವ್ಯವಹಾರದ ಮೇಲೆ ಹದ್ದಿನ ಕಣ್ಣಿಟ್ಟಿದೆ.ಒಟ್ಟು 8 ಹೊಸ ನಿಯಮಗಳನ್ನ (Rules) ಜಾರಿಗೆ ತರ್ತಾ ಇದೆ.
ಇದರ ಬಗ್ಗೆ ನಮಗೆ ಸರಿಯಾದ ಮಾಹಿತಿ ಇಲ್ಲ ಅಂದ್ರೆ, ನಾವು ಕಷ್ಟಪಟ್ಟು ಮಣ್ಣಲ್ಲಿ ಬೆವರು ಸುರಿಸಿ ದುಡಿದ ಹಣವೆಲ್ಲಾ ದಂಡ (Penalty) ಕಟ್ಟೋಕೆ ಹೋಗ್ಬೇಕಾಗುತ್ತೆ! ಬನ್ನಿ, ಆ ಹೊಸ ರೂಲ್ಸ್ ಗಳು ಯಾವುವು? ಅದರಿಂದ ನಮಗೇನು ತೊಂದರೆ? ಅಂತ ನಮ್ಮ ಹಳ್ಳಿ ಭಾಷೆಯಲ್ಲೇ, ಉದಾಹರಣೆ ಸಮೇತ ಬಿಡಿಸಿ ಹೇಳ್ತೀನಿ.
ಬ್ಯಾಂಕಿಗೆ ರೊಕ್ಕ ಹಾಕ್ತೀರಾ? ಲಿಮಿಟ್ ದಾಟಿದ್ರೆ ದಂಡ!
ಮನೆಯಲ್ಲಿ ಕೂಡಿಟ್ಟ ರೊಕ್ಕ ಸೇಫ್ ಆಗಿರ್ಲಿ ಅಂತ ಬ್ಯಾಂಕಿಗೆ ಹಾಕ್ತೀವಿ.ಬೆಳೆ ಮಾರಿದ ದುಡ್ಡು ಬಂದಾಗಲೂ ಸೀದಾ ಬ್ಯಾಂಕಿಗೆ ಕಟ್ತೀವಿ. ಆದರೆ ಇನ್ಮುಂದೆ ಬೇಕಾಬಿಟ್ಟಿ ಕ್ಯಾಶ್ ತಗೊಂಡು ಹೋಗಿ ಬ್ಯಾಂಕಿಗೆ ಕಟ್ಟುವಂತಿಲ್ಲ! ಯಾಕಂದ್ರೆ, ಬ್ಯಾಂಕಿಗೆ ರೊಕ್ಕ ಹಾಕೋಕೂ ಈಗ ಹೊಸ ಲೆಕ್ಕ ಬಂದೈತೆ:
-
ಉಳಿತಾಯ ಖಾತೆ (Savings Account): ನಿಮ್ಮ ಹತ್ರ ಪ್ಯಾನ್ ಕಾರ್ಡ್ ಇದ್ದರೆ, ಒಂದು ವರ್ಷಕ್ಕೆ 10 ಲಕ್ಷ ರೂಪಾಯಿವರೆಗೆ ಮಾತ್ರ ಕ್ಯಾಶ್ ಜಮಾ ಮಾಡ್ಬೋದು.
-
ಚಾಲ್ತಿ ಖಾತೆ (Current Account): ನಿಮ್ಮದು ವ್ಯಾಪಾರದ ಅಕೌಂಟ್ ಆಗಿದ್ರೆ, ಒಂದು ವರ್ಷಕ್ಕೆ 50 ಲಕ್ಷದವರೆಗೆ ಹಣ ಜಮಾ ಮಾಡ್ಬೋದು.
-
ಪ್ಯಾನ್ ಕಾರ್ಡ್ ಇಲ್ಲದಿದ್ರೆ: ನನ್ ಹತ್ರ ಪ್ಯಾನ್ ಕಾರ್ಡ್ ಇಲ್ಲಪ್ಪಾ ಅನ್ನೋರಿಗೆ ವರ್ಷಕ್ಕೆ ಬರೀ 5 ಲಕ್ಷ ಮಾತ್ರ ಜಮಾ ಮಾಡೋಕೆ ಅವಕಾಶ!
ನಮ್ಮ ಹಳ್ಳಿ ಲೆಕ್ಕದಲ್ಲಿ ಕೇಳಿ:
ನೀವು ಅಡಿಕೆನೋ ಅಥವಾ ಹತ್ತಿನೋ ಮಾರಿ, 6 ಲಕ್ಷ ಕ್ಯಾಶ್ ತಂದು ಬ್ಯಾಂಕಿಗೆ ಹಾಕಿದ್ರಿ ಅಂದ್ಕೊಳ್ಳಿ.ನಿಮ್ಮ ಹತ್ತಿರ ಪ್ಯಾನ್ ಕಾರ್ಡ್ ಇಲ್ವಾ ಆಗ ಬ್ಯಾಂಕಿನವರು ನಿಮ್ಮ ಆಧಾರ್ ಕಾರ್ಡ್ Aadhaar Card ಮೂಲಕವೇ ಇನ್ಕಮ್ ಟ್ಯಾಕ್ಸ್ಗೆ ರಿಪೋರ್ಟ್ ಮಾಡ್ತಾರೆ! ಆ ದುಡ್ಡು ಎಲ್ಲಿಂದ ಬಂತು ಅಂತ ಸರಿಯಾದ ಲೆಕ್ಕ ಕೊಡಲಿಲ್ಲ ಅಂದ್ರೆ? ಬರೋಬ್ಬರಿ 84% ವರೆಗೂ ದಂಡ (Penalty) ಬೀಳುತ್ತೆ ಹುಷಾರ್!
ಇದನ್ನೂ ಓದಿ: ನಮ್ಮ ದೇಸಿ ಹಸು ಅಂದ್ರೆ ಬರೀ ಹಾಲಲ್ಲ ಅದರ ಸಗಣಿ-ಗಂಜಲದಾಗೆ ಅಡಗಿರೋ ಕೋಟಿ ಬೆಲೆಯ ಕರಾಮತ್ತು ಕೇಳಿದ್ರೆ ನೀವೇ ದಂಗಾಗ್ತೀರಾ!
ಬ್ಯಾಂಕಿನಿಂದ ಗಂಟುಕಟ್ಟಿ ರೊಕ್ಕ ಡ್ರಾ ಮಾಡ್ತೀರಾ? ಬಂತು ಬ್ರೇಕ್!
ನಮ್ಮನೇಲಿ ಮದುವೆ, ಮುಂಜಿ, ದೇವಸ್ಥಾನದ ಕೆಲಸ ಇದ್ಯಾ?ಅಥವಾ ಹೊಸದಾಗಿ ಮನೆ ಕಟ್ಟೋ ಕೆಲಸ ನಡೀತಿದ್ಯಾ ಇಂಥ ಟೈಮ್ನಲ್ಲಿ ಬ್ಯಾಂಕಿನಿಂದ ಒಟ್ಟಿಗೆ ದೊಡ್ಡ ಮೊತ್ತದ ಹಣ ಡ್ರಾ ಮಾಡ್ತೀವಿ ಅಲ್ವಾ ಆದರೆ, ಈಗ ಬೇಕಾಬಿಟ್ಟಿ ರೊಕ್ಕ ಡ್ರಾ ಮಾಡೋಕೂ ಹೊಸ ಬ್ರೇಕ್ ಬಿದ್ದೈತೆ!
-
ಐಟಿಆರ್ (ITR) ಫೈಲ್ ಮಾಡಿಲ್ಲವಾ?: ನೀವು ಪ್ರತಿ ವರ್ಷ ಟ್ಯಾಕ್ಸ್ ಲೆಕ್ಕ (ITR) ಕೊಟ್ಟಿಲ್ಲ ಅಂದ್ರೆ, ವರ್ಷಕ್ಕೆ 20 ಲಕ್ಷಕ್ಕಿಂತ ಹೆಚ್ಚು ಕ್ಯಾಶ್ ಡ್ರಾ ಮಾಡಿದ್ರೆ ನಿಮ್ಮ ರೊಕ್ಕದಲ್ಲಿ 2% ಟಿಡಿಎಸ್ (TDS) ಕಟ್ ಆಗುತ್ತೆ!
-
ಒಂದು ವೇಳೆ, ಒಂದು ಕೋಟಿಗಿಂತ ಹೆಚ್ಚು ಡ್ರಾ ಮಾಡಿದ್ರೆ? ಬರೋಬ್ಬರಿ 5% ಟಿಡಿಎಸ್ ಕಟ್ ಆಗುತ್ತೆ.
-
ಐಟಿಆರ್ ಫೈಲ್ ಮಾಡುವವರಾಗಿದ್ರೆ: ಅದೇ ನೀವು ಪ್ರತಿ ವರ್ಷ ತಪ್ಪದೇ ಐಟಿಆರ್ ಫೈಲ್ ಮಾಡ್ತಿದ್ರೆ, ಒಂದು ಕೋಟಿವರೆಗೆ ಯಾವುದೇ ಟಿಡಿಎಸ್ ಕಟ್ ಆಗಲ್ಲ. ಆರಾಮಾಗಿ ಡ್ರಾ ಮಾಡ್ಬೋದು.
ಮನೆ ಕಟ್ಟೋಕೆ ಅಂತ ನೀವು 25 ಲಕ್ಷ ರೂಪಾಯಿ ಬ್ಯಾಂಕಿನಿಂದ ಒಟ್ಟಿಗೆ ಡ್ರಾ ಮಾಡಿದ್ರಿ ಅಂದ್ಕೊಳ್ಳಿ.ನೀವು ಐಟಿಆರ್ (ITR) ಫೈಲ್ ಮಾಡಿಲ್ಲ ಅಂದ್ರೆ ಏನಾಗುತ್ತೆ? ಲಿಮಿಟ್ ದಾಟಿದ ಕಾರಣ, ನಿಮ್ಮ ಹಣದಲ್ಲೇ ಟಿಡಿಎಸ್ (TDS) ಕಟ್ ಆಗುತ್ತೆ.ಅಷ್ಟೇ ಅಲ್ಲ, ನೀವು ಇಷ್ಟು ದೊಡ್ಡ ಮೊತ್ತ ತೆಗೆದಿದ್ದೀರಾ ಅನ್ನೋ ಮಾಹಿತಿ ನೇರವಾಗಿ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ಗೆ ಹೋಗಿಬಿಡುತ್ತೆ!
ಆಸ್ಪತ್ರೆ ಖರ್ಚಿಗೆ ರೊಕ್ಕ ಬೇಡ, ವಿಮೆ ಇದ್ರೆ ಸಾಕು!
ನಮ್ಮ ಜನ ಬ್ಯಾಂಕಿನಿಂದ ಒಮ್ಮೆಗೆ ದೊಡ್ಡ ಮೊತ್ತದ ಹಣ ಡ್ರಾ ಮಾಡೋದು ಹೆಚ್ಚಾಗಿ ಆಸ್ಪತ್ರೆ ಖರ್ಚಿಗೆ ಅಲ್ವಾ ಮನೇಲಿ ಯಾರಿಗೋ ಸಡನ್ನಾಗಿ ಹುಷಾರಿಲ್ಲ ಅಂದ್ರೆ ಏನ್ಮಾಡ್ತೀವಿ ಬ್ಯಾಂಕಿನಲ್ಲಿ ಕೂಡಿಟ್ಟ ದುಡ್ಡನ್ನೆಲ್ಲಾ ಒಮ್ಮೆಗೆ ತೆಗೆದುಕೊಂಡು ಹೋಗಿ ಆಸ್ಪತ್ರೆಗೆ ಸುರಿಯುತ್ತೇವೆ.
ಆದರೆ, ಈಗ ಹೀಗೆ ದೊಡ್ಡ ಮೊತ್ತ ಡ್ರಾ ಮಾಡಿದ್ರೂ ಟ್ಯಾಕ್ಸ್ (TDS) ಕಟ್ ಆಗುತ್ತೆ. ಇದನ್ನ ತಪ್ಪಿಸೋಕೆ ಒಂದು ಸುಲಭ ದಾರಿ ಅಂದ್ರೆ, ‘ಹೆಲ್ತ್ ಇನ್ಶೂರೆನ್ಸ್’ (Health Insurance) ಮಾಡಿಸೋದು.
-
ವರ್ಷಕ್ಕೆ ಸ್ವಲ್ಪ ಹಣವನ್ನ (ಪ್ರೀಮಿಯಂ) ವಿಮೆಗೆ ಅಂತ ಕಟ್ತಾ ಬಂದ್ರೆ ಸಾಕು.
-
ದಿಢೀರ್ ಕಾಯಿಲೆ ಬಂದ್ರೆ, 10 ರಿಂದ 20 ಲಕ್ಷದವರೆಗೆ ಆಸ್ಪತ್ರೆ ಖರ್ಚನ್ನ ಇನ್ಶೂರೆನ್ಸ್ ಕಂಪನಿಯವರೇ ನೋಡ್ಕೋತಾರೆ.
-
ನಿಮ್ಮ ಜೇಬಿನಿಂದ ಒಂದು ರೂಪಾಯಿ ಕೊಡದೇನೆ (Cashless) ಟ್ರೀಟ್ಮೆಂಟ್ ಸಿಗುತ್ತೆ.
ಇದರಿಂದ ನೀವು ಎಮರ್ಜೆನ್ಸಿಗೆ ಅಂತ ಬ್ಯಾಂಕಿನಿಂದ ದೊಡ್ಡ ಮೊತ್ತದ ಕ್ಯಾಶ್ ಡ್ರಾ ಮಾಡೋದು ತಪ್ಪುತ್ತೆ.ಇನ್ಕಮ್ ಟ್ಯಾಕ್ಸ್ (Income Tax) ರೂಲ್ಸ್ ಬ್ರೇಕ್ ಆಗಲ್ಲ. ಯಾವ ಇನ್ಶೂರೆನ್ಸ್ ಮಾಡಿಸೋದು ನಮಗೆ ಗೊತ್ತಿಲ್ಲಪ್ಪಾ ಅಂತೀರಾ?
ಈಗ ಡಿಟ್ಟೊ (Ditto) ದಂಥ ಸಾಕಷ್ಟು ಆನ್ಲೈನ್ ವಿಮಾ ಅಡ್ವೈಸರ್ಸ್ ಇದ್ದಾರೆ, ಅವರೇ ನಿಮಗೆ ಕನ್ನಡದಲ್ಲೇ (Kannada) ಕರೆ ಮಾಡಿ ಮಾಹಿತಿ ಕೊಡ್ತಾರೆ. ಅವರ ಸಲಹೆ ಪಡ್ಕೊಳ್ಳಿ.
ವ್ಯಾಪಾರಸ್ಥರಿಗೆ ಎಚ್ಚರಿಕೆ: ರೊಕ್ಕದ ಲೆಕ್ಕಕ್ಕಿದೆ ಹೊಸ ಲಿಮಿಟ್!
ನಮ್ಮ ಊರುಗಳಲ್ಲಿ ಕೆಲವರು ರಸಗೊಬ್ಬರದ ಅಂಗಡಿ, ಕಿರಾಣಿ ಅಂಗಡಿ, ಬಟ್ಟೆ ಅಂಗಡಿ, ಅಥವಾ ಮಂಡಿ ವ್ಯಾಪಾರ ಮಾಡ್ತಿರ್ತಾರೆ.ಹೊಸ ಇನ್ಕಮ್ ಟ್ಯಾಕ್ಸ್ ರೂಲ್ಸ್ (Income Tax Rules) ಇಂಥಾ ವ್ಯಾಪಾರಸ್ಥರಿಗೂ ಬಿಸಿ ಮುಟ್ಟಿಸಿದೆ! ಹೇಗೆ ಅಂತೀರಾ? ನೀವೇನಾದ್ರೂ ಬಿಸಿನೆಸ್ (Business) ಮಾಡ್ತಿದ್ರೆ, ಈ ಎರಡು ರೂಲ್ಸ್ ಖಂಡಿತಾ ನೆನಪಿರಲಿ:
-
ರೊಕ್ಕ ಇಸ್ಕೊಳ್ಳೋದು: ಒಬ್ಬ ವ್ಯಕ್ತಿಯಿಂದ ಒಂದೇ ದಿನದಲ್ಲಿ ನೀವು 2 ಲಕ್ಷಕ್ಕಿಂತ ಹೆಚ್ಚು ಕ್ಯಾಶ್ (Cash) ಪಡೆಯುವಂತಿಲ್ಲ. ಇದು ಸೆಕ್ಷನ್ 269ST ಅಡಿಯಲ್ಲಿ ಬರುವ ಕಟ್ಟುನಿಟ್ಟಿನ ನಿಯಮ.
-
ರೊಕ್ಕ ಕೊಡೋದು: ಹಾಗೆಯೇ, ನಿಮ್ಮ ಬಿಸಿನೆಸ್ ಖರ್ಚಿಗಾಗಿ (Business Expenses) ಒಬ್ಬ ವ್ಯಕ್ತಿಗೆ ದಿನಕ್ಕೆ 10,000 ರೂ. ಗಿಂತ ಹೆಚ್ಚು ಕ್ಯಾಶ್ ಕೊಡುವಂತಿಲ್ಲ. ಕೊಟ್ಟರೆ ಏನಾಗುತ್ತೆ? ಅದು ನಿಮ್ಮ ವ್ಯಾಪಾರದ ಖರ್ಚು ಅಂತ ಇನ್ಕಮ್ ಟ್ಯಾಕ್ಸ್ ಲೆಕ್ಕಕ್ಕೆ (Disallowed – Section 40A(3)) ಬರೋದೇ ಇಲ್ಲ! ಅಂದ್ರೆ, ನಿಮ್ಮ ಲಾಭ ಜಾಸ್ತಿಯಾಗಿ, ಟ್ಯಾಕ್ಸ್ ಕೂಡ ಜಾಸ್ತಿ ಕಟ್ಟಬೇಕಾಗುತ್ತೆ.
ನಿಮ್ಮದು ಒಂದು ಗೊಬ್ಬರದ ಅಂಗಡಿ ಇದೆ ಅಂತ ಇಟ್ಕೊಳ್ಳಿ.ಊರಿನ ದೊಡ್ಡ ರೈತರೊಬ್ಬರು ಬಂದು, ಒಮ್ಮೆಲೆ 2.5 ಲಕ್ಷ ರೂಪಾಯಿ ಕ್ಯಾಶ್ ಕೊಟ್ಟು ಗೊಬ್ಬರ ಖರೀದಿಸ್ತಾರೆ. ವ್ಯಾಪಾರ ಆಯ್ತಲ್ಲಾ ಅಂತ ನೀವು ಆ 2.5 ಲಕ್ಷವನ್ನು ಸಂತೋಷದಿಂದ ಇಸ್ಕೊಂಡ್ರೆ ಏನಾಗುತ್ತೆ ಗೊತ್ತಾ?
ನಿಯಮ ಮೀರಿ ಆ ಹಣ ಇಸ್ಕೊಂಡಿದ್ದಕ್ಕೆ, ಆ 2.5 ಲಕ್ಷದ ಪೂರ್ತಿ ಹಣದ ಮೇಲೆ 100% ದಂಡ (Penalty) ಬೀಳಬಹುದು!ಅಂದ್ರೆ, ನೀವು ಮಾಡಿದ್ದ 2.5 ಲಕ್ಷದ ವ್ಯಾಪಾರವೂ ಹೋಗಿ, ನಿಮ್ಮ ಕೈಯಿಂದಲೇ ಮತ್ತಷ್ಟು ಹಣ 100% ದಂಡವಾಗಿ ಇನ್ಕಮ್ ಟ್ಯಾಕ್ಸ್ಗೆ ಕಟ್ಟಬೇಕಾಗುತ್ತೆ ಹುಷಾರ್!
ಆದ್ದರಿಂದ, 2 ಲಕ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಾಪಾರವಿದ್ದರೂ, ದಯವಿಟ್ಟು ಚೆಕ್ (Cheque) ಅಥವಾ ಆನ್ಲೈನ್ (Online) ಪೇಮೆಂಟ್ ಮೂಲಕವೇ ಮಾಡಿ.
ಇದನ್ನೂ ಓದಿ: ಹಸುವಿನ ಸಗಣಿಯಿಂದ ದಿನಕ್ಕೆ ಬರೋಬ್ಬರಿ ₹40,000 ಲಾಭ! ರೈತರಿಗೆ ಭರ್ಜರಿ ಗುಡ್ ನ್ಯೂಸ್!
ಜಮೀನು ಸೈಟು ಖರೀದಿಗೆ: ಅಡ್ವಾನ್ಸ್ ಕೊಡೋಕೂ ಬಂತು ಹೊಸ ರೂಲ್ಸ್!
ನಮ್ಮ ಹಳ್ಳಿ ಕಡೆ ಅಕ್ಕಪಕ್ಕದವರ ಹೊಲ, ಗದ್ದೆ ಮಾರಾಟಕ್ಕಿದೆ ಅಂದ್ರೆ ಏನ್ ಮಾಡ್ತೀವಿ?ಊರ ಮುಂದಿನ ಪಂಚಾಯ್ತಿ ಕಟ್ಟೆ ಮೇಲೋ, ದೇವಸ್ಥಾನದ ಮುಂದೆಯೋ ಕೂತು ಮಾತಾಡ್ತೀವಿ. ಮಾತುಕತೆ ಮುಗಿದ ಮೇಲೆ, ನಾಲ್ಕು ಜನ ಸಾಕ್ಷಿ ಇಟ್ಕೊಂಡು ಲಕ್ಷಾಂತರ ರೂಪಾಯಿ ರೊಕ್ಕಾನೇ ‘ಬಯಾನಾ’ (ಮುಂಗಡ ಹಣ / ಅಡ್ವಾನ್ಸ್) ಅಂತ ಕೈಗೆ ಕೊಡ್ತೀವಿ.
ಇದು ನಮ್ಮಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ.ಆದ್ರೆ ಕೇಳ್ರಪ್ಪಾ, ಈ ಏಪ್ರಿಲ್ 1 ರಿಂದ (2026) ಈ ಹಳೆ ಪದ್ಧತಿಗೆ ಬ್ರೇಕ್ ಬಿದ್ದಿದೆ!ಹೊಸ ಇನ್ಕಮ್ ಟ್ಯಾಕ್ಸ್ ಕಾಯ್ದೆಯ (Section 185) ಪ್ರಕಾರ, ಭೂಮಿ ವ್ಯವಹಾರದ ಮೇಲೂ ಕಟ್ಟುನಿಟ್ಟಿನ ನಿಯಮ ತರಲಾಗಿದೆ:
-
ರೊಕ್ಕ ಕೊಡುವಂತಿಲ್ಲ: ನೀವು ಯಾವುದೇ ಜಮೀನು, ತೋಟ, ಸೈಟು ಅಥವಾ ಮನೆ ಖರೀದಿಸುವಾಗ ಬರೀ 20,000 ರೂಪಾಯಿಗಿಂತ ಹೆಚ್ಚು ಹಣವನ್ನು ಕ್ಯಾಶ್ (ರೊಕ್ಕದ) ರೂಪದಲ್ಲಿ ಅಡ್ವಾನ್ಸ್ ಆಗಿ ಕೊಡುವಂತಿಲ್ಲ!
-
ರೊಕ್ಕ ವಾಪಸ್ ಪಡೆಯುವಂತೆಯೂ ಇಲ್ಲ: ಕೆಲವೊಮ್ಮೆ ಜಮೀನಿನ ತಕರಾರು ಬಂದು, ವ್ಯವಹಾರ ಕ್ಯಾನ್ಸಲ್ ಆಗುತ್ತೆ ಅಲ್ವಾ? ಆಗ ಆ ಜಾಗದ ಮಾಲೀಕರು ನಿಮಗೆ ಅಡ್ವಾನ್ಸ್ ಹಣ ಹಿಂದಿರುಗಿಸುವಾಗಲೂ (Refund) 20,000 ಕ್ಕಿಂತ ಹೆಚ್ಚು ಹಣವನ್ನು ಕ್ಯಾಶ್ನಲ್ಲಿ ಕೊಡುವಂತಿಲ್ಲ. (Section 188).
ಹಾಗಾದ್ರೆ ರೂಲ್ಸ್ ಮುರಿದ್ರೆ ಏನಾಗುತ್ತೆ?
ನಮ್ಮ ರೊಕ್ಕ ನಾವು ಕೊಡ್ತೀವಿ, ಸರ್ಕಾರಕ್ಕೆ ಹೆಂಗೆ ಗೊತ್ತಾಗುತ್ತೆ? ಅಂತ ನೀವೇನಾದ್ರೂ ಕದ್ದುಮುಚ್ಚಿ ಲಕ್ಷಗಟ್ಟಲೆ ಕ್ಯಾಶ್ ಕೊಟ್ಟು ಜಮೀನು ವ್ಯವಹಾರ ಮಾಡಿದ್ರೆ, ಮುಂದೆ ರಿಜಿಸ್ಟ್ರೇಷನ್ ಟೈಮ್ನಲ್ಲಿ ಸಿಕ್ಕಿಬೀಳೋದು ಗ್ಯಾರಂಟಿ.
ಹೀಗೆ ಸಿಕ್ಕಿಬಿದ್ದರೆ, ನೀವು ಎಷ್ಟು ಮೊತ್ತದ ಕ್ಯಾಶ್ ವ್ಯವಹಾರ ಮಾಡಿದ್ದೀರೋ, ಅಷ್ಟೇ ಪೂರ್ತಿ ಮೊತ್ತವನ್ನು (100%) ದಂಡವಾಗಿ (Penalty) ಇನ್ಕಮ್ ಟ್ಯಾಕ್ಸ್ಗೆ ಕಟ್ಟಬೇಕಾಗುತ್ತೆ!
ಆದಕಾರಣ, ಭೂಮಿ ವ್ಯವಹಾರ ಮಾಡುವಾಗ ಎಷ್ಟೇ ದೊಡ್ಡ ಮೊತ್ತದ ಅಡ್ವಾನ್ಸ್ ಆಗಿರಲಿ, ದಯವಿಟ್ಟು ಬ್ಯಾಂಕ್ ಚೆಕ್ (Cheque), ಡಿಡಿ (DD) ಅಥವಾ ಆನ್ಲೈನ್ (Online) ಮುಖಾಂತರವೇ ಕೊಡಿ. ಸುಖಾಸುಮ್ಮನೆ ರೊಕ್ಕದ ವ್ಯವಹಾರ ಮಾಡಿ, ಕಷ್ಟದ ಹಣವನ್ನು ದಂಡದ ರೂಪದಲ್ಲಿ ಕಳೆದುಕೊಳ್ಳಬೇಡಿ.
ಕೈಸಾಲಕ್ಕೂ ಬಂತು ಕಂಟಕ: 20 ಸಾವಿರದ ಲಿಮಿಟ್ ಮರಿಬೇಡಿ!
ನಮ್ಮ ಹಳ್ಳಿ ಕಡೆ ಮಳೆ ಕೈಕೊಟ್ಟಾಗ, ಬೆಳೆ ನಷ್ಟ ಆದಾಗ ಅಥವಾ ಮನೇಲಿ ದಿಢೀರ್ ಕಷ್ಟ ಬಂದಾಗ ಏನ್ ಮಾಡ್ತೀವಿ ಬ್ಯಾಂಕಿಗೆ ಅಲೆದಾಡೋ ಬದಲು, ಅಕ್ಕಪಕ್ಕದವರ ಹತ್ತಿರ, ಸ್ನೇಹಿತರ ಹತ್ತಿರ ಕೈಬದಲಿ ಸಾಲ Hand loan ಇಸ್ಕೊಳ್ಳೋದು ನಮಗೆಲ್ಲಾ ಮಾಮೂಲಿ.
ನಮ್ಮ ಕಷ್ಟಕ್ಕೆ ತಕ್ಷಣಕ್ಕೆ ಆಗೋರು ನಮ್ಮವರೇ ಅಲ್ವಾ? ಆದರೆ ಅಣ್ಣತಮ್ಮಂದಿರೇ, ಈ ಏಪ್ರಿಲ್ 1 ರಿಂದ (2026) ನೀವು ಪಡೆಯುವ ಕೈಸಾಲದ ಮೇಲೂ ಸರ್ಕಾರ ಕಣ್ಣಿಟ್ಟಿದೆ ಹೊಸ ಇನ್ಕಮ್ ಟ್ಯಾಕ್ಸ್ ನಿಯಮದ (Income Tax Rules) ಪ್ರಕಾರ ಇಲ್ಲೂ ನೀವು ಬಹಳ ಎಚ್ಚರ ವಹಿಸಲೇಬೇಕು:
-
ರೊಕ್ಕ ಇಸ್ಕೊಳ್ಳುವಂತಿಲ್ಲ: ನೀವು ಯಾರಿಂದಲೂ, ಅವರು ನಿಮಗೆ ಎಷ್ಟೇ ಹತ್ತಿರದವರಾಗಿರಲಿ, 20,000 ರೂಪಾಯಿಗಿಂತ ಹೆಚ್ಚು ಹಣವನ್ನು ನಗದು (ಕ್ಯಾಶ್) ರೂಪದಲ್ಲಿ ಸಾಲ ಪಡೆಯುವಂತಿಲ್ಲ.
-
ರೊಕ್ಕ ವಾಪಸ್ ಕೊಡುವಂತಿಲ್ಲ: ಕಷ್ಟ ತೀರಿದ ಮೇಲೆ, ತೆಗೆದುಕೊಂಡ ಆ ಸಾಲವನ್ನು ವಾಪಸ್ ಕೊಡುವಾಗಲೂ 20,000 ಕ್ಕಿಂತ ಹೆಚ್ಚು ಹಣವನ್ನು ಕ್ಯಾಶ್ ರೂಪದಲ್ಲಿ ಕೊಡುವಂತಿಲ್ಲ.
ಹೊಸ ಕಾಯ್ದೆ ಪ್ರಕಾರ, ನೀವು ಇಸ್ಕೊಂಡ ಆ 50,000 ರೂಪಾಯಿಗೆ ಪೂರ್ತಿ 50,000 ರೂಪಾಯಿಯನ್ನು (100%) ದಂಡವಾಗಿ (Penalty) ಸರ್ಕಾರಕ್ಕೆ ಕಟ್ಟಬೇಕಾಗುತ್ತೆ ಗ್ಯಾರಂಟಿ!
ಅದಕ್ಕಾಗಿ, ಎಷ್ಟೇ ತುರ್ತು ಇದ್ದರೂ ಸರಿ, ಸಾಲ ಪಡೆಯುವುದಿದ್ದರೂ ಅಥವಾ ಕೊಡುವುದಿದ್ದರೂ ಬ್ಯಾಂಕ್ ಅಕೌಂಟ್, ಚೆಕ್ ಅಥವಾ ಆನ್ಲೈನ್ (Online) ಮೂಲಕವೇ ವ್ಯವಹಾರ ಮಾಡಿ.
ಮನೆ ಬಾಡಿಗೆ ಅಡ್ವಾನ್ಸ್: ರೊಕ್ಕ ಕೊಟ್ರೆ ಬೀಳುತ್ತೆ 100% ದಂಡ!
ಆದರೆ ಕೇಳ್ರಪ್ಪಾ, ಇದೇ ಏಪ್ರಿಲ್ 1 ರಿಂದ (ಅಂದ್ರೆ ಇನ್ನು ಕೆಲವೇ ದಿನಗಳಲ್ಲಿ) ಈ ಬಾಡಿಗೆ ಅಡ್ವಾನ್ಸ್ ಮೇಲೂ ಹೊಸ ರೂಲ್ಸ್ ಬರ್ತಿದೆ:
-
ರೊಕ್ಕ ಕೊಡುವಂತಿಲ್ಲ: ಮನೆ ಅಥವಾ ಅಂಗಡಿ ಬಾಡಿಗೆಗೆ ಪಡೆಯುವಾಗ, 20,000 ರೂಪಾಯಿಗಿಂತ ಹೆಚ್ಚು ಹಣವನ್ನು ಕ್ಯಾಶ್ ರೂಪದಲ್ಲಿ ಮಾಲೀಕರಿಗೆ ಅಡ್ವಾನ್ಸ್ ಆಗಿ ಕೊಡುವಂತಿಲ್ಲ.
-
ರೊಕ್ಕ ವಾಪಸ್ ಪಡೆಯುವಂತಿಲ್ಲ: ನೀವು ಮನೆ ಖಾಲಿ ಮಾಡುವಾಗ, ಮಾಲೀಕರು ಆ ಅಡ್ವಾನ್ಸ್ ಹಣವನ್ನು ನಿಮಗೆ ವಾಪಸ್ ಕೊಡುವಾಗಲೂ 20,000 ಕ್ಕಿಂತ ಹೆಚ್ಚು ಹಣವನ್ನು ಕ್ಯಾಶ್ ರೂಪದಲ್ಲಿ ಕೊಡಬಾರದು.
ಆದರೆ ಹೊಸ ಇನ್ಕಮ್ ಟ್ಯಾಕ್ಸ್ ಕಾಯ್ದೆ ಪ್ರಕಾರ ಇದು ದೊಡ್ಡ ತಪ್ಪು. ಈ ವಿಚಾರ ಟ್ಯಾಕ್ಸ್ ಇಲಾಖೆ ಕಣ್ಣಿಗೆ ಬಿದ್ದರಂತೂ, ಇಸ್ಕೊಂಡ ಮಾಲೀಕನಿಗೆ 100% ದಂಡ (Penalty) ಬೀಳೋದು ಖಂಡಿತ! ಅದಕ್ಕಾಗಿ, ಬಾಡಿಗೆ ಅಡ್ವಾನ್ಸ್ ಕೊಡುವುದಿದ್ದರೂ, ಡಿಜಿಟಲ್ ಪೇಮೆಂಟ್, ಆನ್ಲೈನ್ (Online) ಅಥವಾ ಚೆಕ್ ಮುಖಾಂತರವೇ ವ್ಯವಹಾರ ಮಾಡಿ ಸೇಫ್ ಆಗಿರಿ.
ಹಳ್ಳಿಯವರ ಮೇಲೂ ಇದೆ ಹದ್ದಿನ ಕಣ್ಣು
ನಮ್ಮದು ಸಣ್ಣ ಹಳ್ಳಿ, ನಾವೆಲ್ಲ ಬಡವರು, ನಾವೇನೋ ಸ್ವಲ್ಪ ದುಡ್ಡು ವ್ಯವಹಾರ ಮಾಡಿದ್ರೆ ಸರ್ಕಾರಕ್ಕೆ ಎಲ್ಲಿಂದ ಗೊತ್ತಾಗುತ್ತೆ? ಅಂತ ಬಹಳಷ್ಟು ಜನ ಅಂದುಕೊಳ್ತಾರೆ. ದಯವಿಟ್ಟು ಅಂಥಾ ಭ್ರಮೆಯಲ್ಲಿ ಇರಬೇಡಿ! ಈಗಿನ ಕಾಲ ಬದಲಾಗಿದೆ. ನೀವು ಎಷ್ಟೇ ಮರೆಯಾಗಿ ರೊಕ್ಕದ ವ್ಯವಹಾರ ಮಾಡಿದ್ರೂ, ಸರ್ಕಾರದ ಕಣ್ಣು ತಪ್ಪಿಸೋದು ಕಷ್ಟ:
-
ಆಧಾರ್ ಎಂಬ ಮಾಯೆ: ಇವತ್ತಿನ ಕಾಲದಲ್ಲಿ ಬರೀ ಪ್ಯಾನ್ ಕಾರ್ಡ್ ಮಾತ್ರವಲ್ಲ, ನಿಮ್ಮ ಆಧಾರ್ ಕಾರ್ಡ್ (Aadhaar Card) ಕೂಡ ಬ್ಯಾಂಕ್ ಅಕೌಂಟ್ ಮತ್ತು ಸರ್ಕಾರದ ಜೊತೆ ಲಿಂಕ್ ಆಗಿದೆ. ನೀವು ಎಲ್ಲಿ ರೊಕ್ಕ ಕೊಟ್ಟರೂ ಆಧಾರ್ ಮೂಲಕ ಸುಲಭವಾಗಿ ಪತ್ತೆ ಹಚ್ಚುತ್ತಾರೆ.
-
ಎಐ (AI) ತಂತ್ರಜ್ಞಾನ: ಈಗಿನ ಹೊಸ ಕಂಪ್ಯೂಟರ್ ತಂತ್ರಜ್ಞಾನ ಎಷ್ಟೊಂದು ಪವರ್ಫುಲ್ ಆಗಿದೆ ಅಂದ್ರೆ, ನಿಮ್ಮ ಬ್ಯಾಂಕ್ ಮೆಸೇಜ್ಗಳು ಮತ್ತು ಹಣದ ವರ್ಗಾವಣೆಯನ್ನು ಅದು ತಾನಾಗಿಯೇ ಟ್ರ್ಯಾಕ್ ಮಾಡುತ್ತೆ.
-
ಸಣ್ಣ ಊರಿಗೂ ಹದ್ದಿನ ಕಣ್ಣು: ನೀವು ಎಷ್ಟೇ ಸಣ್ಣ ಕುಗ್ರಾಮದಲ್ಲಿದ್ದರೂ ಸರಿ, ನಿಮ್ಮ ಪ್ರತಿಯೊಂದು ದೊಡ್ಡ ನಗದು (Cash) ವ್ಯವಹಾರವೂ ಸರ್ಕಾರದ ಕಂಪ್ಯೂಟರ್ಗಳಲ್ಲಿ ರೆಕಾರ್ಡ್ ಆಗ್ತಿರುತ್ತೆ ಅನ್ನೋದನ್ನ ಮರೆಯಬೇಡಿ.
ಇದನ್ನೂ ಓದಿ: 2 ಎಕರೆಯಲ್ಲಿ 10 ಲಕ್ಷ ಆದಾಯ ತರುವ ಬಂಗಾರದ ಬೆಳೆ: ಅರ್ಕ ಸಹನ ಸೀತಾಫಲ ಕೃಷಿ
ಜಾಣರಾಗಿ, ದಂಡದಿಂದ ಪಾರಾಗಿ!
ನೋಡಿದ್ರಲ್ಲಾ ನಮ್ಮೂರ ಜನರೇ! ಕಾಲ ಬದಲಾದಂತೆ ಸರ್ಕಾರ ಕೂಡ ಬಹಳ ಕಟ್ಟುನಿಟ್ಟಾಗ್ತಿದೆ. ಕಪ್ಪು ಹಣ (Black Money) ತಡೆಯೋಕೆ ಅಂತ ಸರ್ಕಾರ ಈ ಎಲ್ಲಾ ಕಠಿಣ ನಿಯಮಗಳನ್ನ ತರ್ತಾ ಇದೆ.
ಇದರಲ್ಲಿ ತಿಳುವಳಿಕೆ ಇಲ್ಲದೆ ನಮ್ಮ-ನಿಮ್ಮಂತ ಸಾಮಾನ್ಯ ರೈತರು, ಹಳ್ಳಿಗರು ಸಿಕ್ಕಿಹಾಕಿಕೊಳ್ಳಬಾರದು ಅಷ್ಟೇ ನಮ್ಮ ಕಾಳಜಿ. ಕಷ್ಟಪಟ್ಟು ಮಣ್ಣಲ್ಲಿ ಬೆವರು ಸುರಿಸಿ ದುಡಿದ ಹಣವನ್ನ ಯಾರದೋ ತಪ್ಪು ಸಲಹೆ ಕೇಳಿ, ದಂಡದ (Penalty) ರೂಪದಲ್ಲಿ ಸರ್ಕಾರಕ್ಕೆ ಕಳೆದುಕೊಳ್ಳಬೇಡಿ.
ಈ ಮೂರು ಮಂತ್ರ ಯಾವತ್ತೂ ನೆನಪಿರಲಿ:
-
ಚೆಕ್ ಬಳಸಿ: ದೊಡ್ಡ ವ್ಯವಹಾರ ಮಾಡುವುದಿದ್ದರೂ ಬ್ಯಾಂಕ್ ಚೆಕ್ (Cheque) ಅಥವಾ ಡಿಡಿ (DD) ಮೂಲಕವೇ ಮಾಡಿ.
-
ಫೋನ್ ಬಳಸಿ: ಮೊಬೈಲ್ ಮೂಲಕ ಫೋನ್ಪೇ, ಗೂಗಲ್ ಪೇ ಅಥವಾ ಆನ್ಲೈನ್ (Online) ಮುಖಾಂತರವೇ ಹಣ ಕಳುಹಿಸಿ.
-
ವಿಮೆ ಮಾಡಿಸಿ: ಇಂದೇ ಒಂದು ಒಳ್ಳೆ ‘ಆರೋಗ್ಯ ವಿಮೆ’ (Health Insurance) ಮಾಡಿಸಿ, ಆಸ್ಪತ್ರೆ ಖರ್ಚು ಮತ್ತು ಟ್ಯಾಕ್ಸ್ ಎರಡರಿಂದಲೂ ಪಾರಾಗಿ.
ಒಂದು ಸಣ್ಣ ವಿನಂತಿ: ಈ ಮಾಹಿತಿ ನಮ್ಮ ಹಳ್ಳಿಯ ಪ್ರತಿಯೊಬ್ಬರಿಗೂ ತಲುಪಬೇಕು. ಹಾಗಾಗಿ, ಈ ಲೇಖನವನ್ನ ನಿಮ್ಮ ಮನೆಯವರಿಗೆ, ಗೆಳೆಯರಿಗೆ ಹಾಗೂ ನಿಮ್ಮೂರಿನ ವಾಟ್ಸಾಪ್ (WhatsApp) ಗ್ರೂಪ್ಗಳಲ್ಲಿ ಮರೆಯದೆ ಶೇರ್ ಮಾಡಿ. ಎಲ್ಲರಿಗೂ ಈ ಹೊಸ ನಿಯಮಗಳ ಬಗ್ಗೆ ಈಗಲೇ ತಿಳುವಳಿಕೆ ಬರಲಿ. ಮತ್ತೊಂದು ಉಪಯುಕ್ತ ಮಾಹಿತಿಯೊಂದಿಗೆ ಮತ್ತೆ ಸಿಕ್ತೀನಿ, ಅಲ್ಲಿವರೆಗೂ ಎಲ್ಲರಿಗೂ ನಮಸ್ಕಾರರೀ!