ಬ್ಯಾಂಕ್ FD ಗಿಂತ ಜಾಸ್ತಿ ಲಾಭ! ಒಂದು ರೂಪಾಯಿ ರಿಸ್ಕ್ ಇಲ್ಲದೆ ಹಣ ಬೆಳೆಸುವ 9 ಬೆಸ್ಟ್ ಸ್ಕೀಮ್‌ಗಳು
ನಮ್ಮ ಹಳ್ಳಿ ಕಡೇಲಿ ಒಬ್ರು ಮಾತು ಹೇಳ್ತಾರೆ, “ಬೆವರು ಸುರಿಸಿ ದುಡಿದ ಹಣ, ಕಣ್ಣಿಗೆ ಕಾಣ್ಬೇಕು, ಕೈಗೆ ಸಿಗ್ಬೇಕು” ಅಂತ. ನಾವು ಭೂಮಿಗೆ ಬೀಜ ಹಾಕಿದ್ರೆ, ಅದು ಹುಟ್ಟಿ ಬೆಳೆಯುತ್ತೆ ಅನ್ನೋ ನಂಬಿಕೆ ನಮಗಿರುತ್ತೆ. ಅದೇ ನಂಬಿಕೆ ನಾವು ಉಳಿತಾಯ ಮಾಡೋ ದುಡ್ಡಿನ ಮೇಲೂ ಇರಬೇಕು ಅಲ್ವಾ?
ಟಿವಿನಲ್ಲಿ, ಮೊಬೈಲ್‌ನಲ್ಲಿ ಶೇರ್ ಮಾರ್ಕೆಟ್, ಮ್ಯೂಚುವಲ್ ಫಂಡ್ ಅಂತ ಏನೇನೋ ಹೇಳ್ತಾರೆ. ಆದ್ರೆ ಅದರಲ್ಲಿ ಲಾಭವೂ ಇರುತ್ತೆ, ಒಮ್ಮೊಮ್ಮೆ ಹಾಕಿದ ಬಂಡವಾಳನೇ ಮುಳುಗಿ ಹೋಗೋ ಭಯನೂ ಇರುತ್ತೆ.
ನಮ್ಮಂತವರಿಗೆ ಆ ರಿಸ್ಕ್ ಬ್ಯಾಡಪ್ಪಾ. ನಮ್ಮ ದುಡ್ಡು ಭದ್ರವಾಗಿರಬೇಕು. ನಾಳೆ ಬೆಳಗ್ಗೆ ನಮಗೆ ಕಷ್ಟ ಅಂದಾಗ ನಮ್ಮ ಕೈಗೆ ಸಿಗಬೇಕು. ಜೊತೆಗೆ ಬ್ಯಾಂಕ್ ಎಫ್.ಡಿ (FD) ಗಿಂತ ಒಂದಿಷ್ಟು ಬಡ್ಡಿ ಜಾಸ್ತಿ ಸಿಗಬೇಕು.
ಹೀಗೆ ಯೋಚನೆ ಮಾಡೋರಿಗಾಗಿಯೇ ಸರ್ಕಾರ 9 ಭರ್ಜರಿ ಯೋಜನೆಗಳನ್ನ ಜಾರಿಗೆ ತಂದಿದೆ. ಇಲ್ಲಿ ನಿಮ್ಮ ದುಡ್ಡಿಗೆ ಪಕ್ಕಾ ಗ್ಯಾರಂಟಿ.ಬನ್ನಿ, ಆ ಯೋಜನೆಗಳು ಯಾವುವು? ಅದರಿಂದ ನಮಗೆ ಏನೇನು ಲಾಭ? ಅಂತ ಸರಳವಾಗಿ ತಿಳ್ಕೊಳೋಣ.
ರಾಷ್ಟ್ರೀಯ ಉಳಿತಾಯ ಪತ್ರ (NSC)
ಇದನ್ನ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಅಂತ ಕರೀತಾರೆ. ಇದು ನಮ್ಮ ಪೋಸ್ಟ್ ಆಫೀಸಿನಲ್ಲಿ ಸಿಗುವಂತ ಒಂದು ಪಕ್ಕಾ ಗ್ಯಾರಂಟಿ ಯೋಜನೆ. ಒಂದು ಮರ ನೆಟ್ಟು, ಐದು ವರ್ಷ ಬಿಟ್ಟು ಹಣ್ಣು ತಿಂದಂಗೆ ಈ ಯೋಜನೆ.
-
ಬಡ್ಡಿ ದರ ಎಷ್ಟಿದೆ?: ಇದಕ್ಕೆ ಸರ್ಕಾರ ಪ್ರತಿ ವರ್ಷ 7.7% ಭರ್ಜರಿ ಬಡ್ಡಿ ಕೊಡುತ್ತೆ.
-
ಲಾಭದ ಲೆಕ್ಕ: ಉದಾಹರಣೆಗೆ, ನೀವು ಇವತ್ತು 1 ಲಕ್ಷ ರೂಪಾಯಿ ಹಾಕಿದ್ರೆ, 5 ವರ್ಷದ ನಂತ್ರ ನಿಮಗೆ 1,44,903 ರೂಪಾಯಿ ವಾಪಸ್ ಸಿಗುತ್ತೆ.
-
ಎಷ್ಟು ದುಡ್ಡು ಹಾಕಬಹುದು?: 5 ಲಕ್ಷ ಹಾಕಿದ್ರೆ 7 ಲಕ್ಷದ 24 ಸಾವಿರ ಸಿಗುತ್ತೆ! ಇದರಲ್ಲಿ ಇಷ್ಟೇ ದುಡ್ಡು ಹಾಕಬೇಕು ಅಂತೇನಿಲ್ಲ. ದಾಖಲೆ ಇದ್ರೆ 50 ಲಕ್ಷ ಕೂಡ ಇಡಬಹುದು.
-
ಟ್ಯಾಕ್ಸ್ ಲಾಭ: ಇದರಲ್ಲಿ ದುಡ್ಡು ಹಾಕಿದ್ರೆ ಇನ್ಕಮ್ ಟ್ಯಾಕ್ಸ್ ಕಟ್ಟುವಾಗಲೂ (Section 80C) ರಿಯಾಯಿತಿ ಸಿಗುತ್ತೆ.
ಇದನ್ನೂ ಓದಿ: ಉಚಿತ ಕರೆಂಟ್ ಇದೆ ಅಂತ ಕರೆಂಟ್ ಒಲೆ ತರೋಕೆ ಹೊರಟೀರಾ ಹಾಗಾದ್ರೆ ಅಂಗಡಿಗೆ ಹೋಗೋ ಮುನ್ನ ಈ ಅಸಲಿ ಲೆಕ್ಕಾಚಾರ ಒಮ್ಮೆ ನೋಡಿ!
ಆರ್.ಬಿ.ಐ ಫ್ಲೋಟಿಂಗ್ ರೇಟ್ ಬಾಂಡ್ಸ್
ನಮ್ಮ ದುಡ್ಡನ್ನ ರಿಸರ್ವ್ ಬ್ಯಾಂಕ್ (RBI) ನಲ್ಲೇ ಇಟ್ಟರೆ ಹೆಂಗಿರುತ್ತೆ? ಅಷ್ಟು ಸೇಫ್ ಈ ಯೋಜನೆ. ನಮ್ಮ ದೊಡ್ಡ ದೊಡ್ಡ ಬ್ಯಾಂಕುಗಳಲ್ಲಿ ಇದನ್ನ ಸುಲಭವಾಗಿ ಮಾಡಿಸಬಹುದು.
-
ಸೂಪರ್ ಬಡ್ಡಿ: ಇದರಲ್ಲಿ 8.05% ದಷ್ಟು ದೊಡ್ಡ ಬಡ್ಡಿ ಸಿಗುತ್ತೆ.
-
ವಿಶೇಷತೆ: ಮೇಲ್ಗಡೆ ಹೇಳಿದ ಉಳಿತಾಯ ಪತ್ರಕ್ಕಿಂತ (NSC) ಇದರಲ್ಲಿ ಯಾವಾಗಲೂ 0.35% ಬಡ್ಡಿ ಜಾಸ್ತಿನೇ ಇರುತ್ತೆ.
-
ಆರು ತಿಂಗಳಿಗೊಮ್ಮೆ ಆದಾಯ: ಇದರಲ್ಲಿ ಬಡ್ಡಿಯನ್ನ ಆರು ತಿಂಗಳಿಗೊಮ್ಮೆ ನಿಮ್ಮ ಕೈಗೆ ಕೊಡ್ತಾರೆ.
-
ಅಂದ್ರೆ, ನೀವು 10 ಲಕ್ಷ ಹಾಕಿದ್ರೆ ವರ್ಷಕ್ಕೆ 80,500 ರೂಪಾಯಿ ಬಡ್ಡಿ. ಅದನ್ನ ಅರ್ಧ-ಅರ್ಧ ಮಾಡಿ ಕೊಡ್ತಾರೆ.
ಸುಕನ್ಯಾ ಸಮೃದ್ಧಿ ಯೋಜನೆ (SSY)
ಮನೆಗೊಂದು ಹೆಣ್ಣುಮಗು ಹುಟ್ಟಿದ್ರೆ ಸಾಕ್ಷಾತ್ ಮಹಾಲಕ್ಷ್ಮಿ ಬಂದ್ಲು ಅಂತೀವಿ. ಆಕೆಯ ಮುಂದಿನ ಓದು, ಮದುವೆಗೆ ಇದು ಹೇಳಿ ಮಾಡಿಸಿದ ಸ್ಕೀಮ್. 10 ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಈ ಅಕೌಂಟ್ ಓಪನ್ ಮಾಡಿಸಬಹುದು.
-
ಹೆಚ್ಚು ಬಡ್ಡಿ ದರ: ಇದರಲ್ಲಿ ಬರೋಬ್ಬರಿ 8.2% ಬಡ್ಡಿ ಇದೆ.
-
ಕನಿಷ್ಠ ಹೂಡಿಕೆ: ಬರೀ 250 ರೂಪಾಯಿಯಿಂದ ಶುರು ಮಾಡಬಹುದು. ಗರಿಷ್ಠ ವರ್ಷಕ್ಕೆ ಒಂದೂವರೆ ಲಕ್ಷದವರೆಗೆ ಇಡಬಹುದು.
-
ಲಕ್ಷಾಂತರ ಲಾಭ: ತಿಂಗಳಿಗೆ 5,000 ರೂಪಾಯಿ ತರ 15 ವರ್ಷ ಕಟ್ಟಿದ್ರೆ, 21ನೇ ವರ್ಷಕ್ಕೆ ಅದು ಮೆಚುರಿಟಿ ಆಗಿ ಬರೋಬ್ಬರಿ 27.71 ಲಕ್ಷ ರೂಪಾಯಿ ಸಿಗುತ್ತೆ!
-
ಮೂರು ತರಹದ ಟ್ಯಾಕ್ಸ್ ಫ್ರೀ: ಇದರಲ್ಲಿ ಹಾಕೋ ದುಡ್ಡಿಗೆ, ಬರೋ ಬಡ್ಡಿಗೆ ಹಾಗೂ ಕೊನೆಗೆ ಸಿಗೋ ದುಡ್ಡಿಗೆ… ಯಾವುದಕ್ಕೂ ಟ್ಯಾಕ್ಸ್ ಇರಲ್ಲ.
ಪೋಸ್ಟ್ ಆಫೀಸ್ ಮಂತ್ಲಿ ಸ್ಕೀಮ್ (POMIS)
ನನ್ನ ಹತ್ರ ಒಟ್ಟಿಗೆ ಒಂದಿಷ್ಟು ದುಡ್ಡಿದೆ. ಅದನ್ನ ಇಟ್ಟು, ಪ್ರತಿ ತಿಂಗಳು ನನಗೆ ಕರೆಕ್ಟಾಗಿ ಆದಾಯ ಬರಬೇಕು ಅನ್ನೋರಿಗೆ ಇದು ಬೆಸ್ಟ್ ಆಯ್ಕೆ. ಹಸು ಕಟ್ಟಿ ಪ್ರತಿ ದಿನ ಹಾಲು ಕರೆದಂಗೆ ಇದು.
-
ಬಡ್ಡಿ ದರ: 7.4% ಬಡ್ಡಿ ಸಿಗುತ್ತೆ. 5 ವರ್ಷದವರೆಗೆ ಈ ಯೋಜನೆ ಇರುತ್ತೆ.
-
ಮಿತಿ: ಒಬ್ಬರೇ ಆದ್ರೆ 9 ಲಕ್ಷದವರೆಗೆ, ಗಂಡ-ಹೆಂಡತಿ ಸೇರಿ ಮಾಡಿದ್ರೆ 15 ಲಕ್ಷದವರೆಗೆ ದುಡ್ಡು ಇಡಬಹುದು.
-
ಲಾಭದ ಲೆಕ್ಕ: ಉದಾಹರಣೆಗೆ, ನೀವು 15 ಲಕ್ಷ ಇಟ್ರೆ, ಪ್ರತಿ ತಿಂಗಳು ನಿಮ್ಮ ಕೈಗೆ 9,250 ರೂಪಾಯಿ ಬಡ್ಡಿ ಸಿಗುತ್ತೆ.
-
5 ವರ್ಷ ಕಳೆದ ಮೇಲೆ ನೀವು ಇಟ್ಟಿದ್ದ 15 ಲಕ್ಷ ಕೂಡ ನಿಮಗೆ ಒಂದು ರೂಪಾಯಿ ಕಮ್ಮಿ ಆಗದೆ ವಾಪಸ್ ಸಿಗುತ್ತೆ.
ಇದನ್ನೂ ಓದಿ: ರೈತರ ಪಾಲಿಗೆ ಒಲಿಯಿತು ಭರ್ಜರಿ ಜಾಕ್‌ಪಾಟ್! ಡಿಸಿ ಆಫೀಸ್ ಅಲೆಯುವ ಕಷ್ಟಕ್ಕೀಗ ಬಿದ್ದಿದೆ ಬ್ರೇಕ್!
ಹಿರಿಯ ನಾಗರಿಕರ ಉಳಿತಾಯ (SCSS)
ನಮ್ಮ ಮನೆಯಲ್ಲಿರುವ ವಯಸ್ಸಾದ ಅಪ್ಪ-ಅಮ್ಮನಿಗೆ ಅಥವಾ 60 ವರ್ಷ ಮೇಲ್ಪಟ್ಟವರಿಗೆ ಈ ಯೋಜನೆ ತುಂಬಾನೇ ಉಪಯುಕ್ತ. ವಯಸ್ಸಾದ ಕಾಲದಲ್ಲಿ ಯಾರಿಗೂ ಹೊರೆಯಾಗದೆ, ನೆಮ್ಮದಿಯಾಗಿ ಜೀವಿಸಲು ಇದು ದಾರಿ ಮಾಡಿಕೊಡುತ್ತೆ.
-
ಬಡ್ಡಿ ದರ: ಇದರಲ್ಲಿ ಕೂಡ 8.2% ನಷ್ಟು ಭರ್ಜರಿ ಬಡ್ಡಿ ಇದೆ.
-
ಎಷ್ಟು ಇಡಬಹುದು?: ಗರಿಷ್ಠ 30 ಲಕ್ಷದವರೆಗೆ ಹಣ ಇಡಬಹುದು.
-
ಬಡ್ಡಿ ಬರೋದು ಯಾವಾಗ?: ನೀವು 10 ಲಕ್ಷ ಇಟ್ರೆ, ಪ್ರತಿ ಮೂರು ತಿಂಗಳಿಗೊಮ್ಮೆ 20,500 ರೂಪಾಯಿ ನಿಮ್ಮ ಕೈ ಸೇರುತ್ತೆ.
-
ಆಸ್ಪತ್ರೆ ಖರ್ಚಿಗೋ, ಗುಳಿಗೆ ತರಿಸಿಕೊಳ್ಳೋಕೋ ಈ ದುಡ್ಡು ತುಂಬಾ ಉಪಯೋಗ ಆಗುತ್ತೆ.
ಟರ್ಮ್ ಇನ್ಶೂರೆನ್ಸ್ ಯಾಕೆ ಅಷ್ಟು ಮುಖ್ಯ?
ನಾವು ಜಮೀನಿನ ಬೆಳೆ ರಕ್ಷಣೆಗೆ ಅಂತ ಎಷ್ಟೆಲ್ಲಾ ಕಷ್ಟಪಟ್ಟು ಬೇಲಿ ಹಾಕ್ತೀವಿ. ಹಾಗೆ ಬ್ಯಾಂಕಿನಲ್ಲಿ ದುಡ್ಡು ಸೇಫ್ ಆಗಿರಲಿ ಅಂತ ಒಳ್ಳೆ ಸ್ಕೀಮ್ ಹುಡುಕ್ತೀವಿ.
ಆದರೆ, ಇದೆಲ್ಲಾ ಯಾರಿಗೋಸ್ಕರ? ನಮ್ಮ ಹೆಂಡತಿ-ಮಕ್ಕಳು, ಕುಟುಂಬ ಚೆನ್ನಾಗಿರಲಿ ಅಂತ ತಾನೇ? ನಾವು ಎಷ್ಟೇ ಉಳಿತಾಯ ಮಾಡಿದ್ರು, ನಾಳೆ ಏನಾಗುತ್ತೆ ಅಂತ ಹೇಳೋಕೆ ಆಗುತ್ತಾ? ನಮ್ಮ ಜೀವಕ್ಕೆ ಯಾವುದಾದ್ರೂ ಗ್ಯಾರಂಟಿ ಇದೆಯಾ ಅಣ್ಣಾ? ಖಂಡಿತ ಇಲ್ಲ.
ಮನೆ ಯಜಮಾನನ ಆಸರೆಯಲ್ಲೇ ಇಡೀ ಸಂಸಾರ ನಡೀತಿರುತ್ತೆ. ಆತನೇ ಆ ಕುಟುಂಬದ ಆಧಾರ ಸ್ತಂಭ. ಆಕಸ್ಮಿಕವಾಗಿ ಆತನಿಗೆ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ, ಹೆಂಡತಿ-ಮಕ್ಕಳ ಗತಿ ಏನು?
ಅವರ ಮುಂದಿನ ಜೀವನ ಹೆಂಗೆ? ಓದು, ಮದುವೆ, ಮನೆ ಖರ್ಚು ಯಾರು ನೋಡ್ಕೊಳ್ತಾರೆ? ದಿಕ್ಕೇ ತೋಚದಂತಾಗಿ, ಅವರು ಬೀದಿಗೆ ಬರಬಾರದು ತಾನೇ?
ಅದಕ್ಕಾಗಿಯೇ ಪ್ರತಿಯೊಬ್ಬರೂ, ಮುಖ್ಯವಾಗಿ ಮನೆಯ ಜವಾಬ್ದಾರಿ ಹೊತ್ತವರು ಕಡ್ಡಾಯವಾಗಿ ಮಾಡಿಸಲೇಬೇಕಾದ ಒಂದು ಕೆಲಸ ಅಂದ್ರೆ ಅದು ‘ಟರ್ಮ್ ಇನ್ಶೂರೆನ್ಸ್’ (Term Insurance).
ಟರ್ಮ್ ಇನ್ಶೂರೆನ್ಸ್ ಅಂದ್ರೆ ಏನು? ಅದರಿಂದ ಏನೇನು ಲಾಭ?
-
ಬಹಳ ಕಡಿಮೆ ಖರ್ಚು: ಇದು ಬೇರೆ ವಿಮೆಗಳ ತರ ವರ್ಷಕ್ಕೆ ಹತ್ತಾರು ಸಾವಿರ ರೂಪಾಯಿ ಕಟ್ಟೋ ಹಾಗಿಲ್ಲ.
-
ತಿಂಗಳ ಕಂತು: ನಿಮ್ಮ ವಯಸ್ಸಿಗೆ ತಕ್ಕಂತೆ ತಿಂಗಳಿಗೆ ಕೇವಲ ಒಂದು 500 ರಿಂದ 600 ರೂಪಾಯಿ ಪ್ರೀಮಿಯಂ (Premium) ಕಟ್ಟಿದ್ರೆ ಸಾಕು. (ಬೀಡಿ, ಸಿಗರೇಟು, ಟೀ ಖರ್ಚಿಗಿಂತ ಕಮ್ಮಿ ಬಿಡಿ!).
-
ದೊಡ್ಡ ಭದ್ರತೆ: ದೇವರು ಮಾಡ್ಲಿ, ವಿಮೆ ಮಾಡಿಸಿದ ವ್ಯಕ್ತಿಗೆ ಏನಾದ್ರೂ ಅನಾಹುತವಾಗಿ ಜೀವ ಹೋದರೆ, ಅವರ ಕುಟುಂಬದವರ ಕೈಗೆ ಒಮ್ಮೆಲೇ 50 ಲಕ್ಷನೋ, ಅಥವಾ 1 ಕೋಟಿ ರೂಪಾಯಿವರೆಗೂ ಪರಿಹಾರದ ಮೊತ್ತ ಸಿಗುತ್ತೆ.
ಪ್ರೀತಿಪಾತ್ರರನ್ನ ಕಳೆದುಕೊಂಡ ದುಃಖನ ಯಾರಿಂದಲೂ, ಎಷ್ಟು ಕೋಟಿ ಕೊಟ್ಟರು ತುಂಬಿಕೊಡೋಕೆ ಆಗಲ್ಲ ಅನ್ನೋದು ನಿಜ. ಆದರೆ, ಆ ದುಃಖದ ಜೊತೆಗೆ ಆರ್ಥಿಕ ಸಂಕಷ್ಟನೂ ಎದುರಾಗಬಾರದು.
ಕೈಯಲ್ಲಿ ಒಂದಿಷ್ಟು ಗಟ್ಟಿ ದುಡ್ಡು ಇದ್ದರೆ, ನಿಮ್ಮ ಅನುಪಸ್ಥಿತಿಯಲ್ಲೂ ನಿಮ್ಮ ಕುಟುಂಬ, ಮಕ್ಕಳು ಯಾರ ಮುಂದೆಯೂ ಕೈ ಒಡ್ಡುವ ಪರಿಸ್ಥಿತಿ ಬರೋದಿಲ್ಲ. ಅವರು ನೆಮ್ಮದಿಯಾಗಿ ಜೀವನ ಕಟ್ಟಿಕೊಳ್ಳಬಹುದು.
ವಿಮೆ ಮಾಡಿಸುವಾಗ ಈ ಒಂದು ವಿಷಯ ನೆನಪಿರಲಿ: ನೀವು ಯಾವುದೇ ಕಂಪನಿಯಲ್ಲಿ ಟರ್ಮ್ ಇನ್ಶೂರೆನ್ಸ್ ಮಾಡಿಸುವಾಗ ‘ಕ್ಲೇಮ್ ಸೆಟಲ್ಮೆಂಟ್ ರೇಶಿಯೋ’ (Claim Settlement Ratio) ಎಷ್ಟಿದೆ ಅಂತ ಒಮ್ಮೆ ಚೆಕ್ ಮಾಡಿ. ಅಂದರೆ, ನೂರು ಜನ ವಿಮೆ ಕೇಳಿ ಹೋದಾಗ, ಎಷ್ಟು ಜನರಿಗೆ ಅವರು ಪ್ರಾಮಾಣಿಕವಾಗಿ ದುಡ್ಡು ವಾಪಸ್ ಕೊಟ್ಟಿದ್ದಾರೆ ಅನ್ನೋದನ್ನ ವಿಚಾರಿಸಿ, ಆಮೇಲೆ ವಿಮೆ ಮಾಡಿಸಿ.
ದುಡ್ಡು ಕಳಕೊಂಡ್ರು, ಪ್ರಾಣ ಹೋದ್ರು, ನಮ್ಮ ಹೆಂಡತಿ-ಮಕ್ಕಳು ಆರ್ಥಿಕವಾಗಿ ನರಳಬಾರದು, ಅವರ ಭವಿಷ್ಯಕ್ಕೆ ಒಂದು ರಕ್ಷಾ ಕವಚ ಇರಬೇಕು ಅನ್ನೋದೇ ಇದರ ಮುಖ್ಯ ಉದ್ದೇಶ. ಇವತ್ತೇ ಯೋಚನೆ ಮಾಡಿ, ನಿಮ್ಮ ಕುಟುಂಬದ ಭದ್ರತೆಗಾಗಿ ಒಂದು ಒಳ್ಳೆ ಟರ್ಮ್ ಇನ್ಶೂರೆನ್ಸ್ ಮಾಡಿಸಿ.
ಇದನ್ನೂ ಓದಿ: ಬ್ಯಾಂಕ್ ಎಫ್‌ಡಿಯಲ್ಲಿ FD ಹೆಚ್ಚು ಲಾಭ ಗಳಿಸುವ ಲ್ಯಾಡರಿಂಗ್ ಟ್ರಿಕ್: ಹಳ್ಳಿಗರಿಗಾಗಿ ಸರಳ ಮಾಹಿತಿ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF)
ನಾನು ಸ್ವಲ್ಪ-ಸ್ವಲ್ಪ ಹಣಾನೇ ಸೇರಿಸ್ತೀನಿ, ಮುಂದೊಂದು ದಿನ ದೊಡ್ಡ ಗಂಟು ಕೈಗೆ ಬರಬೇಕು” ಅನ್ನೋರಿಗೆ ಇದು ಪಕ್ಕಾ ಯೋಜನೆ.
-
ಅವಧಿ: ಇದು 15 ವರ್ಷದ ಲಾಕ್-ಇನ್ ಇರುತ್ತೆ.
-
ಬಡ್ಡಿ ದರ: ಪ್ರಸ್ತುತ 7.1% ಬಡ್ಡಿ ಸಿಗ್ತಾ ಇದೆ.
-
ಲಾಭದ ಗುಟ್ಟು: ವರ್ಷಕ್ಕೆ 1.5 ಲಕ್ಷ ರೂಪಾಯಿ ತರ 15 ವರ್ಷ ಹಾಕಿದ್ರೆ, ಕೊನೆಗೆ ನಿಮಗೆ 40.6 ಲಕ್ಷ ರೂಪಾಯಿ ಕೈ ಸೇರುತ್ತೆ!
-
ಅತ್ಯಂತ ಸುರಕ್ಷಿತ: ನೀವು ಬ್ಯಾಂಕಿನಲ್ಲಿ ಬೇರೆ ಸಾಲ ಮಾಡಿದ್ರು, ಕೋರ್ಟ್ ಆರ್ಡರ್ ತಂದು ಈ PPF ದುಡ್ಡನ್ನ ಕಸಿದುಕೊಳ್ಳುವ ಹಾಗಿಲ್ಲ. ಅಷ್ಟು ಸೇಫ್ ಇದು!
ನ್ಯಾಷನಲ್ ಪೆನ್ಷನ್ ಸಿಸ್ಟಮ್ (NPS)
ಇದು ಕೂಡ ಸರ್ಕಾರದ ಯೋಜನೆ. ಆದ್ರೆ ಇಲ್ಲಿ ನಿಮ್ಮ ದುಡ್ಡನ್ನ ಸ್ವಲ್ಪ ಶೇರ್ ಮಾರ್ಕೆಟ್ ನಲ್ಲೂ ಹಾಕ್ತಾರೆ.
-
ಯಾರು ಮಾಡಬಹುದು?: 18 ರಿಂದ 70 ವರ್ಷದೊಳಗಿನ ಯಾರು ಬೇಕಾದ್ರೂ ಈ ಅಕೌಂಟ್ ಮಾಡಬಹುದು.
-
ಲಾಭ ಎಷ್ಟು?: ಇದರಲ್ಲಿ 9% ದಿಂದ 12% ವರೆಗೆ ಬಡ್ಡಿ ನಿರೀಕ್ಷೆ ಮಾಡಬಹುದು.
-
ನೀವು ಹಾಕಿದ ದುಡ್ಡು 60 ವರ್ಷ ಆದ್ಮೇಲೆ ನಿಮಗೆ ಪೆನ್ಷನ್ ತರ ಸ್ವಲ್ಪ-ಸ್ವಲ್ಪ ಸಿಗುತ್ತೆ. ವಯಸ್ಸಾದ ಮೇಲೆ ಸ್ವತಂತ್ರವಾಗಿ ಬದುಕಲು ಇದು ಆಸರೆ.
ಅಟಲ್ ಪೆನ್ಷನ್ ಯೋಜನೆ (APY)
ನಮ್ಮಂತ ಸಣ್ಣ-ಪುಟ್ಟ ರೈತರಿಗೆ, ದಿನಗೂಲಿ ಮಾಡೋರಿಗೆ ಇದು ಹೇಳಿ ಮಾಡಿಸಿದ ಸ್ಕೀಮ್. “ಚಿಕ್ಕ ಉಳಿತಾಯ, ದೊಡ್ಡ ಪೆನ್ಷನ್” ಅನ್ನೋದು ಇದರ ಲೆಕ್ಕಾಚಾರ.
-
ಯಾರು ಇನ್ಕಮ್ ಟ್ಯಾಕ್ಸ್ ಕಟ್ಟಲ್ವೋ, ಅಂತವರು (18 ರಿಂದ 40 ವರ್ಷದವರು) ಇದನ್ನ ಮಾಡಿಸಬಹುದು.
-
ನಿಮ್ಮ ವಯಸ್ಸಿಗೆ ತಕ್ಕಂತೆ ತಿಂಗಳಿಗೆ 100-200 ರೂಪಾಯಿ ಚಿಕ್ಕ ಮೊತ್ತ ಕಟ್ಟುತ್ತಾ ಹೋದರೆ ಸಾಕು.
-
60 ವರ್ಷ ತುಂಬಿದ ಮೇಲೆ ತಿಂಗಳಿಗೆ 1,000 ದಿಂದ 5,000 ರೂಪಾಯಿವರೆಗೆ ಪೆನ್ಷನ್ ಖಂಡಿತ ಸಿಗುತ್ತೆ.
ಕಿಸಾನ್ ವಿಕಾಸ್ ಪತ್ರ (KVP)
ಯಾರೇ ದಲ್ಲಾಳಿ ಬಂದು “ನಿಮ್ಮ ದುಡ್ಡನ್ನ 6 ತಿಂಗಳಲ್ಲಿ, 1 ವರ್ಷದಲ್ಲಿ ಡಬಲ್ ಮಾಡ್ತೀವಿ, ನಮ್ಗೆ ಕೊಡಿ” ಅಂದ್ರೆ ದಯವಿಟ್ಟು ನಂಬ್ಬೇಡಿ. ಅವೆಲ್ಲಾ ಮೋಸದ ಜಾಲ. ಆದ್ರೆ ಸರ್ಕಾರದ ಈ ಯೋಜನೆಯಲ್ಲಿ ನಿಮ್ಮ ದುಡ್ಡು ಪಕ್ಕಾ ಡಬಲ್ ಆಗುತ್ತೆ!
-
ಬಡ್ಡಿ ದರ ಎಷ್ಟಿದೆ?: 7.5% ಬಡ್ಡಿ ಇದೆ.
-
ಹಣ ಡಬಲ್ ಆಗೋದು ಯಾವಾಗ?: ನೀವು ಇಟ್ಟ ದುಡ್ಡು 115 ತಿಂಗಳುಗಳಲ್ಲಿ (ಅಂದ್ರೆ 9 ವರ್ಷ 7 ತಿಂಗಳಿಗೆ) ಡಬಲ್ ಆಗುತ್ತೆ.
-
ಲಾಭ ಹೆಂಗೆ?: ನೀವು 5 ಲಕ್ಷ ಹಾಕಿದ್ರೆ 115 ತಿಂಗಳ ನಂತ್ರ 10 ಲಕ್ಷ ಆಗುತ್ತೆ. 25 ಲಕ್ಷ ಹಾಕಿದ್ರೆ 50 ಲಕ್ಷ ಆಗುತ್ತೆ. ಯಾವುದೇ ಮೋಸ ಇಲ್ಲದೆ ಹಣ ಡಬಲ್ ಆಗುತ್ತೆ.
ಇದನ್ನೂ ಓದಿ: ಕಡಿಮೆ ಖರ್ಚು ದುಪ್ಪಟ್ಟು ಹಾಲು: ಹಸು ಸಾಕಾಣಿಕೆಯನ್ನು ಉದ್ಯಮವಾಗಿಸುವ ಲಾಭದಾಯಕ ಟ್ರಿಕ್ ಇಲ್ಲಿದೆ!
ಇಂದೇ ಉಳಿತಾಯ ಮಾಡಿ
ನೋಡಿದ್ರಲ್ಲಾ ಸ್ನೇಹಿತರೇ, ಮಳೆ ಬಂದಾಗ ನೀರು ಹಿಡಿದಿಟ್ಟುಕೊಂಡ್ರೆ ಬೇಸಿಗೆಗೆ ಆಗುತ್ತೆ. ಹಾಗೆ, ಈಗ ದುಡಿಯುವ ಶಕ್ತಿ ಇದ್ದಾಗ ಈ ಸರ್ಕಾರಿ ಯೋಜನೆಗಳಲ್ಲಿ ದುಡ್ಡು ಹಾಕಿದ್ರೆ, ಮುಂದೆ ಕಷ್ಟದ ಕಾಲಕ್ಕೆ ಅದೇ ನಮಗೆ ಆಸರೆ ಆಗುತ್ತೆ.
ನಿಮ್ಮ ಮಗಳ ಭವಿಷ್ಯಕ್ಕೆ ‘ಸುಕನ್ಯಾ ಸಮೃದ್ಧಿ’ ಮಾಡಿ. ತಿಂಗಳ ಖರ್ಚಿಗೆ ‘ಪೋಸ್ಟ್ ಆಫೀಸ್ ಮಂತ್ಲಿ ಸ್ಕೀಮ್’ ಮಾಡಿ. ಹಣ ಡಬಲ್ ಆಗೋಕೆ ‘ಕಿಸಾನ್ ವಿಕಾಸ್ ಪತ್ರ’ ತಗೊಳ್ಳಿ.
ಯಾವುದು ನಿಮಗೆ ಸರಿ ಹೊಂದುತ್ತೆ ಅಂತ ಯೋಚನೆ ಮಾಡಿ, ನಾಳೆನೇ ಹತ್ತಿರದ ಪೋಸ್ಟ್ ಆಫೀಸ್ ಅಥವಾ ಬ್ಯಾಂಕಿಗೆ ಭೇಟಿ ನೀಡಿ.ನಿಮಗೆ ಈ ಮಾಹಿತಿ ಇಷ್ಟ ಆಗಿದ್ರೆ, ಉಪಯೋಗ ಆಗುತ್ತೆ ಅನ್ನಿಸಿದ್ರೆ, ದಯವಿಟ್ಟು ನಿಮ್ಮ ಊರಿನ ವಾಟ್ಸಾಪ್ ಗ್ರೂಪುಗಳಲ್ಲಿ, ಗೆಳೆಯರಿಗೆ ಶೇರ್ ಮಾಡಿ.